ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಕೋಮು-ಸೌಹಾರ್ದತೆಯ ಹರಿಕಾರ ಕರ್ತೃ ಶ್ರೀ ಜ. ಫಕೀರೇಶ್ವರರ ತಪೋಭೂಮಿಯಾದ ಶಿರಹಟ್ಟಿ ಪಟ್ಟಣದಲ್ಲಿ ರವಿವಾರ ಹಿಂದೂ-ಮುಸ್ಲಿಂ ಭಕ್ತರು ಜೊತೆಗೂಡಿ ಹೆಜ್ಜೆಮೇಳ ಹಾಕುವುದರೊಂದಿಗೆ ಮೊಹರಂ ಹಬ್ಬವನ್ನು ಆಚರಣೆ ಮಾಡಿದರು.
ಪಟ್ಟಣವೂ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಮುಸ್ಲಿಂ ಬಾಂಧವರು ಅಗ್ನಿಕುಂಡದಲ್ಲಿ ದೇವರನ್ನು ಹೊತ್ತುಕೊಂಡು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಅನೇಕ ಹಿಂದೂಗಳು ಸಹ ಈ ಹಬ್ಬದಲ್ಲಿ ಪಾಲ್ಗೊಂಡು ಪ್ರಾರ್ಥನೆಯನ್ನು ಸಲ್ಲಿಸಿದರು. ಮೊಹರಂ ಹಬ್ಬದಲ್ಲಿ ದೇವರ ಮೆರವಣಿಗೆಯು ಅತ್ಯಂತ ಆಕರ್ಷಣೀಯವಾಗಿದ್ದು, ಇದರಲ್ಲಿ ಯುವಕರು ಲೇಜಿಮ್ ಹಿಡಿದು ಜಾನಪದ ಸೊಗಡಿನ ಹಾಡಿಗೆ ನೃತ್ಯ ಮಾಡುತ್ತಾ, ಸನಾದಿಯ ನಿನಾದಕ್ಕೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಇದರಲ್ಲಿ ಶಿರಹಟ್ಟಿಯ ಡಾ. ಬಿ.ಆರ್. ಅಂಬೇಡ್ಕರ ನಗರದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೆಜ್ಜೆ ಮೇಳಕ್ಕೆ ರಂಗು ತಂದರು.
ಮುಸ್ಲಿಂ ಬಾಂಧವರೇ ಇಲ್ಲದ ತಾಲೂಕಿನ ತಾರೀಕೊಪ್ಪ ಗ್ರಾಮದಲ್ಲಿ ಹಿಂದೂಗಳೇ ಅಲಾಯಿ ದೇವರುಗಳನ್ನು ಕೂರಿಸಿ ಮೊಹರಂ ಹಬ್ಬವನ್ನು ಆಚರಿಸಿ ಅಗ್ನಿಕುಂಡದಲ್ಲಿ ಹಾಯುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.