ಹುಬ್ಬಳ್ಳಿ: ನಿಮ್ಮೆಲ್ಲರಿಗೂ ಗೊತ್ತಿರೋ ಹಾಗೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಗಣಪತಿ ಉತ್ಸವದ ಸಂಭ್ರಮ ಮನೆ ಮಾಡಿದ್ದು, ವಾಣಿಜ್ಯನಗರಿ ಈಗ ಕೇಸರಿಯ ನಗರವಾಗಿದೆ. ಎಲ್ಲೆಡೆಯೂ ಕಣ್ಣು ಹಾಯಿಸಿದಷ್ಟು ಕೇಸರ ಧ್ವಜಗಳು ರಾರಾಜಿಸುತ್ತಿವೆ.
ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಪ್ರತಿಷ್ಟಾಪನೆಗೊಂಡಿರುವ ಗಣಪತಿ ವಿಸರ್ಜನೆಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಸಂಭ್ರಮ ಮನೆ ಮಾಡಿದೆ. ವಾಣಿಜ್ಯನಗರಿಯ ಹೃದಯ ಭಾಗ ಸಂಪೂರ್ಣ ಕೇಸರಿ ಬಾವುಟದಿಂದ ಕಂಗೊಳಿಸುತ್ತಿರುವುದು ನಿಜಕ್ಕೂ ಕಣ್ಮನ ಸೆಳೆಯುತ್ತಿದೆ.
ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಮೂರು ದಿನಗಳ ಕಾಲ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವಕಾಶ ನೀಡಿದ್ದು, ಮೂರು ದಿನಗಳ ನಂತರ ಭರ್ಜರಿಯಾಗಿ ವಿನಾಯಕ ವಿಸರ್ಜನೆಗೊಳ್ಳಲಿದ್ದಾನೆ. ಡಿಸಿಪಿ, ಎಸಿಪಿ, ಇನ್ಸ್‌ಪೆಕ್ಟರ್ ತಂಡ ನೇತೃತ್ವದಲ್ಲಿ ಪೊಲೀಸ್ ಕಣ್ಗಾವಲು ಇರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಒಂದು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.