ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ಪ್ರಕಟವಾಗಿದ್ದು, ಕೊನೆಯ 14 ತಿಂಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೇರಲು ಬಿಜೆಪಿಯ ಸುಭಾಸ ಮ್ಯಾಗೇರಿ, ಸುಜಾತಾ ಶಿಂಗ್ರಿ ಹಾಗೂ ಯಮನೂರ ತಿರಕೋಜಿ ನಡುವೆ ಪೈಪೋಟಿ ಏರ್ಪಟ್ಟಿದೆ.
ಪಟ್ಟಣದ ಪುರಸಭೆಗೆ 23 ಸ್ಥಾನಗಳಿದ್ದು, 18 ಬಿಜೆಪಿ ಹಾಗೂ ೫ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದಾರೆ. ಬಿಜೆಪಿ ಮೊದಲ ಹಂತದ ಅಧಿಕಾರ ಅವಧಿಗೆ ವೀರಪ್ಪ ಪಟ್ಟಣಶೆಟ್ಟಿ ಅಧ್ಯಕ್ಷರಾಗಿ, ಲೀಲಾವತಿ ವನ್ನಾಲ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಹೀಗಾಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೇಲೆ ಆಕಾಂಕ್ಷಿಗಳಾಗಿದ್ದ ಕೆಲ ಸದಸ್ಯರಿಗೆ ನಿರಾಸೆಯಾಗಿತ್ತು. ಹೀಗಾಗಿ ಪುರಸಭೆ ಅಧ್ಯಕ್ಷ ಸ್ಥಾನಕ್ಕೇರಲು ಹಿರಿಯ ರಾಜಕಾರಣಿಗಳು, ಸಮಾಜದ ಮುಖಂಡರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಬಿಜೆಪಿ ಹೈಕಮಾಂಡ್ ಯಾರನ್ನು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಿದೆ ಎನ್ನುವತ್ತ ಎಲ್ಲರ ಚಿತ್ತ ನೆಟ್ಟಿದೆ.
ಪಟ್ಟಣದ ಪುರಸಭೆಯ ಕೊನೆಯ 14 ತಿಂಗಳ ಅವಧಿಗೆ ನಡೆಯಲಿರುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಸ ಮ್ಯಾಗೇರಿ, ಯಮನೂರ ತಿಕರೋಜಿ ಹಾಗೂ ಸುಜಾತಾ ಶಿಂಗ್ರಿ ಪ್ರಮುಖ ರೇಸ್‌ನಲ್ಲಿದ್ದಾರೆ. ಆದರೆ ವಿಜಯಾ ಮಳಗಿ, ಉಮಾ ಮ್ಯಾಕಲ್, ದ್ರಾಕ್ಷಾಯಿಣಿ ಚೋಳಿನ ಸಹ ಆಕ್ಷಾಂಕ್ಷಿಗಳಾಗಿದ್ದರೆ 9ನೇ ವಾರ್ಡಿನ ಕೌಸರಬಾನು ಹುನಗುಂದ ತಾವು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದಿರುವುದರ ಹಿಂದಿನ ಕಾರಣವು ಕುತೂಹಲಕ್ಕೆ ಕಾರಣವಾಗಿದೆ.
ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯ ಎಂದು ಪ್ರಕಟವಾಗಿರುವ ಪರಿಣಾಮ ಬಿಜೆಪಿ 18 ಸದಸ್ಯರಲ್ಲಿ ಹಿಂದಿನ ಪುರಸಭೆ ಸ್ಥಾಯಿ ಸಮಿತಿ ಚೇರಮನ್ ಸ್ಥಾನ, ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೇರಿದ್ದ 4 ಸದಸ್ಯರು ಪ್ರಸ್ತುತ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ರೇಸ್‌ನಿಂದ್ ಹೊರಬಿದ್ದಿದ್ದಾರೆ ಎನ್ನವ ಚರ್ಚೆಗಳಿವೆ. ಹೀಗಾಗಿ ಇನ್ನುಳಿದ 14 ಸದಸ್ಯರ ಪೈಕಿ ಪುರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯ ಇರುವುದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 7 ಸದಸ್ಯರಿಗೆ ನೀಡುವ ಸಾಧ್ಯತೆಗಳು ವಿರಳ ಎನ್ನಲಾಗುತ್ತಿದೆ. ಪರಿಣಾಮ ಇನ್ನುಳಿದ 7 ಸದಸ್ಯರಲ್ಲಿ 3 ತೀವ್ರ ಪೈಪೋಟಿ ನಡೆಸಿದ್ದು, ರಾಜಕೀಯ ಲೆಕ್ಕಾಚಾರದಲ್ಲಿ ಮುಳಗಿದ್ದಾರೆ.
ಪಟ್ಟಣದ ಅಭಿವೃದ್ಧಿ ಪೂರಕವಾಗಿ ಕೆಲಸವಾಗಬೇಕು. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವರಲ್ಲಿಯೇ ಕಚ್ಚಾಟ ನಡೆದಿದೆ. ಶಾಸಕರು ಅಭಿವೃದ್ಧಿಪೂರಕವಾಗಿದ್ದು, ಪುರಸಭೆ ಅಧ್ಯಕ್ಷರಾಗಿ ಆಯ್ಕೆ ಆಗುವವರು ಸಹ ಸಮರ್ಥವಾಗಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಿ ಎನ್ನವ ಆಶಯ ಹೊಂದಿದ್ದೇವೆ ಹೊರತು ಇತರ ಉದ್ದೇಶಗಳಿಲ್ಲ.
– ಶಿವರಾಜ ಘೋರ್ಪಡೆ.
ವಿಪಕ್ಷ ಸದಸ್ಯ.