ಕೊಡಗು: ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕಂಡಕ್ಟರ್ ಗೆ ಸಾರ್ವಜನಿಕ ಸ್ಥಳದಲ್ಲಿಯೇ ಚಾಲಕನೋರ್ವ ಗುಂಡು ಹಾರಿಸಿ ಬೆದರಿಕೆ ಹಾಕಿರುವ ಘಟನೆ ಮಡಿಕೇರಿಯ KSRTC ಡಿಪೋ ಬಳಿ ಜರುಗಿದೆ.
ಇನ್ನೂ ನಿರ್ವಾಹಕನಿಗೆ ಕೊಲೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಚಾಲಕನನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವೇಣುಗೋಪಾಲ್ ಎಂದು ಗುರುತಿಸಲಾಗಿದೆ.
ಕೆಎಸ್ಆರ್‌ಟಿಸಿ ಮಡಿಕೇರಿ ಘಟಕದಲ್ಲಿ ವೇಣುಗೋಪಾಲ್ ಹಾಗೂ ರೂಪೇಶ ಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಚಾಲಕ ವೇಣುಗೋಪಾಲ್ ಯಾವಾಗಲೂ ಒಂದು ಕೈಯಲ್ಲಿ ಮೊಬೈಲ್ ಬಳಕೆ ಮಾಡುತ್ತಲೇ ಬಸ್ ಚಾಲನೆ ಮಾಡುತ್ತಿದ್ದರು. ಅಲ್ಲದೇ ಮದ್ಯಸೇವನೆ ಮಾಡುತ್ತಿರುವ ಬಗ್ಗೆಯೂ ಸಾರ್ವಜನಿಕರು ಮ್ಯಾನೇಜರ್ ಅವರಿಗೆ ದೂರು ನೀಡಿದ್ದರು ಎನ್ನಲಾಗಿದೆ.
ಹೀಗಾಗಿ ಬಿರುನಾಣಿ ಮಾರ್ಗದಿಂದ ಬದಲಾಯಿಸಿ ಬೇರೆ ಮಾರ್ಗಕ್ಕೆ ಕರ್ತವ್ಯಕ್ಕೆ ಹಾಕಲಾಗಿತ್ತು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದಿದ್ದ ವೇಣುಗೋಪಾಲ್ ನನ್ನನ್ನು ಮಾರ್ಗ ಬದಲಾವಣೆ ಮಾಡುವುದಕ್ಕೆ ನಿರ್ವಾಹಕ ರೂಪೇಶ ಕುಮಾರನೇ ಕಾರಣ ಎಂದು ಸೋಮವಾರ ಸಂಜೆ ಘಟಕಕ್ಕೆ ಬಂದು ತನಗೆ ಜಮ್ಮಾ ಹಕ್ಕಿನಿಂದ ಬಂದಿರುವ ಕೋವಿಯನ್ನು ತಂದು ನಿನ್ನನ್ನು ಸುಮ್ಮನೇ ಬಿಡುವುದಿಲ್ಲ ಎಂದು ಗಲಾಟೆ ಮಾಡುತ್ತಾ ಬಸ್ ಘಟಕದಿಂದ ಹೊರಗೆ ಬಂದು ಗಾಳಿಯಲ್ಲಿ ಗುಂಡು ಹಾರಿಸಿ ಕೊಲೆ ಬೆದರಿಕೆ ಹಾಕಿದ್ದನು.
ಇದರಿಂದ ಭಯಗೊಂಡ ನಿರ್ವಾಹಕ ರೂಪೇಶ ಕುಮಾರ್ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಪೊಲೀಸರು ಚಾಲಕ ವೇಣುಗೋಪಾಲನನ್ನು ಬಂಧಿಸಿದ್ದಾರೆ.