ಭಾರತದ ಸಂವಿಧಾನವು ಒಂದು ಕನಸು, ದೂರದೃಷ್ಟಿ, ದೇಶದ ಜನತೆಗೆ ನೀಡಿದ ಭರವಸೆಗಳ ಗುಚ್ಛವಾಗಿದೆ. ಸಂವಿಧಾನವು ಯಾವುದೇ ಸಂಸ್ಥೆಯನ್ನು ಅಥವಾ ರಾಜಕೀಯ ಸಂಘಟನೆಯನ್ನು ಆಡಳಿತ ಮಾಡಲು ಬೇಕಾಗುವ ಆಯಕಟ್ಟು, ವಿಧಾನಗಳು ಮತ್ತು ಕಾನೂನುಗಳನ್ನು ನಿರೂಪಿಸುವ ವ್ಯವಸ್ಥೆ. ಸಾಮಾನ್ಯವಾಗಿ ಇದು ಲಿಖಿತ ರೂಪದಲ್ಲಿ ಇರುತ್ತದೆ. ಭಾರತ ಸಂವಿಧಾನವು ಜಗತ್ತಿನಲ್ಲಿನ ಅತಿ ದೊಡ್ಡ ಹಾಗೂ ಲಿಖಿತ ಸಂವಿಧಾನ ಎಂದು ಹೇಳಲಾಗುತ್ತದೆ.
ಒಂದು ದೇಶವು ಅನುಸರಿಸುವ ಮೂಲ ನಿಯಮಗಳ ಒಂದು ಗುಂಪನ್ನು ಸಂವಿಧಾನ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ರಾಷ್ಟ್ರದ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯು ಕೆಲವೊಂದು ನಿಯಮ-ನಿಬಂಧನೆಗಳಿಗೆ ಅನುಗುಣವಾಗಿ ನಡೆಯಬೇಕು. ಇಂತಹ ನಿಯಮಗಳ ಸಮೂಹವೇ ಸಂವಿಧಾನ.
ಭಾರತೀಯ ಸಂವಿಧಾನದ ಇತಿಹಾಸ ಒಂದು ದೇಶದೊಡನೆ, ದೇಶದ ಜನರೊಡನೆ ಬೆಳೆದ ಸಂಕೀರ್ಣ ರಾಜಕೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಯಶಸ್ವಿಯಾಗಿ ಭಟ್ಟಿ ಇಳಿಸಿದ ಸಾಧನೆಯ ಕಥೆಯ ಹೂರಣ. ಭಾರತದ ಸಂವಿಧಾನವು ಡಿಸೆಂಬರ್ 9, 1947ರಿಂದ ನವೆಂಬರ್ 26, 1949ರ ನಡುವೆ ರಚನೆಗೊಂಡಿತು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲ್ಪಟ್ಟ ಭಾರತದ ಸಂವಿಧಾನವು ಜನವರಿ 26, 1950ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಅಂತೆಯೇ, ನವೆಂಬರ್ 26ನ್ನು ಸಂವಿಧಾನ ದಿನ ಎಂದು ಆಚರಿಸಲಾಗುತ್ತಿದೆ.
ನಾಡಿನ ಮೂಲಭೂತ ನಿಯಮವಾಗಿ ಮಾಡಿದ ಹೆಮ್ಮೆಯ ಚರಿತ್ರೆ ಹೊಂದಿರುವ, ಭಾರತೀಯರಿಂದಲೇ ಭಾರತೀಯರಿಗಾಗಿ ನಿರ್ಮಿಸಿದ ಐತಿಹಾಸಿಕ ದಾಖಲೆ ನಮ್ಮ ಭಾರತದ ಸಂವಿಧಾನ. ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳಾ ಸದಸ್ಯರಿದ್ದರು. ಅದರ ಕರಡನ್ನು ೧೯೪೯ರ ನವೆಂಬರ್ ತಿಂಗಳಿನಲ್ಲಿ ಸಲ್ಲಿಸಲಾಯಿತು. ಸಲ್ಲಿಸಿದ ಬಳಿಕವೂ ಸುಮಾರು 2 ವರ್ಷ 11 ತಿಂಗಳು 17 ದಿನಗಳ ಕಾಲ ನೂರಾರು ತಜ್ಞರು ಶ್ರಮವಹಿಸಿದ ಫಲವಾಗಿ ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನ ಸಿದ್ಧವಾಗಿತ್ತು.
ಸಂವಿಧಾನ ಪೂರ್ಣಗೊಂಡ ದಿನವೇ 1949ರ ನವೆಂಬರ್ 26. ಇದಕ್ಕೆ 1930ರಲ್ಲಿ ಅಂದಿನ ಕಾಂಗ್ರೆಸ್‌ನ ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯಕ್ಕೆ ಪಣ ತೊಡಲಾಯಿತು. ಆ ಐತಿಹಾಸಿಕ ದಿನ ಕೂಡ ನವೆಂಬರ 26ಆಗಿದೆ. ಇಡೀ ದೇಶಕ್ಕೆ ಅನ್ವಯವಾಗುವ ಸಂವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಅರ್ಥವೂ ಬಂದಿತ್ತು. ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲ 284 ಮಂದಿ ಸದಸ್ಯರು 1950ರ ಜನವರಿ 24ರಂದು ಈ ದಾಖಲೆಗೆ ಸಹಿ ಮಾಡಿದರು. ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ಅಕ್ಟೋಬರ್ 12, 2015ರಂದು ಮುಂಬೈನಲ್ಲಿ ಅಂಬೇಡ್ಕರ್ ಸ್ಮಾರಕಕ್ಕೆ ಶಂಕುಸ್ಥಾಪನನೆ ಮಾಡುವಾಗ ಪ್ರಧಾನಿ ನರೇಂದ್ರ ಮೋದಿಯವರು, ನವೆಂಬರ್ 26ನ್ನು ದೇಶದ ಸಂವಿಧಾನ ದಿನವಾಗಿ ಆಚರಿಸುವಂತೆ ಮೊದಲ ಬಾರಿಗೆ ಘೋಷಿಸಿದ್ದರು. ಸಂವಿಧಾನದ ಮಹತ್ವವನ್ನು ಎಲ್ಲರಿಗೂ ತಿಳಿಸುವುದು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಅಂದಿನಿಂದ ಪ್ರತಿ ವರ್ಷವೂ ನ.26ರಂದು ದೇಶದ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಅರಿವು ನೀಡಲಾಗುತ್ತಿದೆ.
ಒಟ್ಟಾರೆಯಾಗಿ ಭಾರತದ ಸಂವಿಧಾನ ರಾಷ್ಟçದ ಐಕ್ಯತೆಯ ಹೆಗ್ಗುರುತು. ಇಂದು ಭಾರತದ ಸಂವಿಧಾನ ದಿನ. ನಮ್ಮ ಸಂವಿಧಾನ ಇಡೀ ಪ್ರಪಂಚದಲ್ಲಿಯೇ ಒಂದು ಮಾದರಿಯಾಗಿದೆ. ರಾಷ್ಟ್ರದ ಎಲ್ಲ ಆಗುಹೋಗುಗಳೂ ಸಂವಿಧಾನವನ್ನು ಅನುಸರಿಸಿ ನಡೆಯುತ್ತವೆ. ಸಂವಿಧಾನವೇ ಭಾರತದ ಮೂಲಭೂತ ಹಾಗೂ ಪರಮೋಚ್ಚ ಕಾಯಿದೆಯೆಂದು ಭಾರತೀಯರು ಒಪ್ಪುತ್ತಾರೆ. ಸಂವಿಧಾನದ ಪಿತಾಮಹರೆನ್ನಿಸಿಕೊಳ್ಳುವ ಅಂಬೇಡ್ಕರರ ನುಡಿಗಳನ್ನು ಇಲ್ಲಿ ಸ್ಮರಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ.
ಹೀಗೆ ಸಂವಿಧಾನದ ಕುರಿತು ಹತ್ತು ಹಲವು ಕಾರ್ಯಕ್ರಮಗಳನ್ನು/ಯೋಜನೆಗಳನ್ನು ಹಾಕಿಕೊಂಡಾಗ ಮಾತ್ರ ನವೆಂಬರ್ 26ರ ಸಂವಿಧಾನ ದಿನಾಚರಣೆಗೆ ಮಹತ್ವ. ಸಂವಿಧಾನದ ಆಶಯಗಳಿಗೆ ಶೋಭೆ ತರುವ ಮೂಲಕ ನಾವು-ನೀವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ನಿರ್ದೇಶನದಂತೆ ನಡೆದುಕೊಳ್ಳೋಣ. ಸುಭದ್ರವಾದ, ಬಲಿಷ್ಠವಾದ, ಸಮೃದ್ಧವಾದ ರಾಷ್ಟç ನಿರ್ಮಾಣಕ್ಕಾಗಿ ಶ್ರಮಿಸೋಣ.
– ಬಸವರಾಜ ಎಮ್.ಯರಗುಪ್ಪಿ.
ಬಿಆರ್‌ಪಿ ಶಿರಹಟ್ಟಿ, ಲಕ್ಮೇಶ್ವರ