ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಧರ್ಮ ಜಾಗೃತಿ, ಸಂಘಟನೆ, ತ್ರಿವಿಧ ದಾಸೋಹ ಸೇವೆಯೊಂದಿಗೆ ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ಮಠ-ಮಾನ್ಯಗಳು ನಾಡಿಗೆ ಅಪಾರವಾದ ಕೊಡುಗೆಯನ್ನು ನೀಡಿವೆ ಎಂದು ಆದ್ರಳ್ಳಿ ಗವಿಸಿದ್ದೇಶ್ವರ ಮಠದ ಶ್ರೀ ಕುಮಾರ ಮಹಾರಾಜರು ಹೇಳಿದರು.
ಅವರು ತಾಲೂಕಿನ ಆದ್ರಳ್ಳಿ ಗವಿಸಿದ್ದೇಶ್ವರದ ಮಠದಲ್ಲಿ ಯಾತ್ರಿ ನಿವಾಸ, ದಾಸೋಹ ಮನೆ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜನರಲ್ಲಿನ ಅಜ್ಞಾನ, ಮೂಢನಂಬಿಕೆ, ಅಂಧಾಚರಣೆಗಳನ್ನು ಹೋಗಲಾಡಿಸಿ ಧರ್ಮಪ್ರಜ್ಞೆ, ವೈಜ್ಞಾನಿಕ ಮನೋಭಾವ ಮೂಡಿಸುವ ಕಾರ್ಯವನ್ನು ಮಠ-ಮಾನ್ಯಗಳು ಮಾಡುತ್ತವೆ. ಮಠ-ಮಾನ್ಯಗಳು ಮಾಡುವ ಸಮಾಜಮುಖಿ ಕಾರ್ಯಗಳಿಗೆ ಭಕ್ತರ ಸಹಾಯ-ಸಹಕಾರ ಅಗತ್ಯವಾಗಿದೆ. ಮಠಗಳು ಯಾರೊಬ್ಬರ ಸ್ವತ್ತಲ್ಲ. ಬದಲಾಗಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವ ಶಾಂತಿ, ನೆಮ್ಮದಿ, ನಂಬಿಕೆ, ಆತ್ಮಬಲ ತುಂಬುವ ಕೇಂದ್ರಗಳಾಗಿವೆ. ಗ್ರಾಮೀಣ ಭಾಗದ ಗುಡ್ಡದ ಪ್ರದೇಶದಲ್ಲಿರುವ ಗವಿಮಠಕ್ಕೆ ಬರುವ ಭಕ್ತರಿಗೆ ಪ್ರಸಾದ, ಶುದ್ಧ ಕುಡಿಯುವ ನೀರು, ವಿಶ್ರಾಂತಿ ಸೇರಿ ಕನಿಷ್ಠ ಸೌಲಭ್ಯವಾದರೂ ಕಲ್ಪಿಸುವ ಮತ್ತು ಗೋಶಾಲೆ ಮಾಡುವ ಉದ್ದೇಶ ತಮ್ಮದಾಗಿದೆ ಎಂದರು.
ರಾಣೇಬೆನ್ನೂರ ಮತಕ್ಷೇತ್ರದ ಮಾಜಿ ಶಾಸಕ ಅರುಣಕುಮಾರ ಪೂಜಾರ, ಕೆಪಿಸಿಸಿ ಪ್ರ. ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಭೂಮಿಪೂಜೆಯಲ್ಲಿ ಪಾಲ್ಗೊಂಡು ಗವಿಮಠದ ಶ್ರೀ ಕುಮಾರ ಮಹಾರಾಜರು ಮಾಡುವ ಸಮಾಜಮುಖಿ ಕಾರ್ಯಗಳಿಗೆ ಸಾಧ್ಯವಾದಷ್ಟು ಸೇವೆ-ಸಹಾಯ-ಸಹಕಾರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಭಕ್ತರಾದ ರಾಜು ಮಕರಿ, ವಿದ್ಯಾಧರ ಹಲಗೇರಿ, ಡಿಳ್ಳೆಪ್ಪ ಲಮಾಣಿ, ಶಿವಶಂಕರ್ ಕೆ, ಈರಪ್ಪ ರಾಹುತ, ಶಾರವ್ವ ಲಮಾಣಿ, ಮಾಮಿಸಾಬ ವಾಲಿಕಾರ, ಹನುಮಂತಗೌಡ ಪಾಟೀಲ, ಚನ್ನಪ್ಪ ಲಮಾಣಿ, ಉಡಚಮ್ಮ ಹರಿಜನ, ಮಂಜವ್ವ ಬಾರ್ಕಿ, ತಿಪ್ಪಣ್ಣ ತಳವಾರ, ನಾಗೇಶ ಲಮಾಣಿ, ಮಾಂತೇಶ ಪಾಟೀಲ, ಮಾನಪ್ಪ ಲಮಾಣಿ, ಕೋಟೆಪ್ಪ ಜಿನಕಿ, ಮುಕ್ಕಣ್ಣ ಚಿಂಚಲಿ ಇದ್ದರು.