ವಿವಾದಾತ್ಮಕ ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಲಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯಿಂದ ನಗರದ ಮುಳಗುಂದ ನಾಕಾದಲ್ಲಿರುವ ಶಾಹಿ ಈದ್ಗಾ ಮೈದಾನದಿಂದ ಬೃಹತ್ ರ‍್ಯಾಲಿ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಕೆಲಕಾಲ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮೌಲಾನಾ ಅಬ್ದುಲಸಮ್ಮದ ಜಕಾತಿ ಮಾತನಾಡಿ, ಇಡೀ ದೇಶದಲ್ಲಿ ಕೊಟ್ಯಾಂತರ ಮುಸ್ಲಿಂ ಸಮುದಾಯದ ಜನರು ಬೀದಿಗಿಳಿದು ವಿವಾದಾತ್ಮಕ ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕೆಂದು ಕೇಂದ್ರ ಸರ್ಕಾರದ ವಿರುದ್ದ ಹೋರಾಟಗಳನ್ನು ನಡೆಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ನಾವು ಮಾಡಿದ್ದೇ ಸರಿ ಎಂದು ಬೆನ್ನು ತಟ್ಟಿಕೊಳ್ಳುತ್ತಿದೆ. ಇಂತಹ ಸರ್ವಾಧಿಕಾರಿ ಧೋರಣೆಯನ್ನು ನಾವು ಖಂಡಿಸುತ್ತೇವೆ. ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂದಕ್ಕೆ ಪಡೆಯುವವರೆಗೂ ನಾವು ನಮ್ಮ ಹೋರಾಟಗಳನ್ನು ನಿಲ್ಲಿಸುವುದಿಲ್ಲ ಎಂದರು.

ಮೌಲಾನಾ ಶಬ್ಬೀರಅಹ್ಮದ ಬೋದ್ಲೇಖಾನ ಮಾತನಾಡಿ, ನಮ್ಮ ಧಾರ್ಮಿಕ ಸ್ವಾತಂತ್ರವನ್ನು ಕಸಿದುಕೊಳ್ಳುವ ಹುನ್ನಾರ ಕೇಂದ್ರ ಸರ್ಕಾರದ್ದಾಗಿದೆ. ನಮ್ಮ ದೇಶದ ಸಂವಿಧಾನವು ನೀಡಿರುವ ಹಕ್ಕಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದೆ. ನಮ್ಮ ಕೊನೆಯುಸಿರು ಇರುವವರೆಗೊ ನಾವು ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೌಲಾನಾ ಶಮಶುದ್ದಿನ ಅಣ್ಣಿಗೇರಿ, ಎಂ.ಸಿ. ಶೇಖ, ಬರಕತಅಲಿ ಮುಲ್ಲಾ, ಜೂನಸಾಬ ನಮಾಜಿ, ಮೆಹಬೂಬಸಾಬ (ಚಿಮ್ಮಿ) ನದಾಫ್, ಮುನ್ನಾ ರೇಶ್ಮಿ, ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಬಾಬಾಜಾನ ಬಳಗಾನೂರ, ಕಾರ್ಯದರ್ಶಿ ಇಮ್ತಿಯಾಜ ಆರ್.ಮಾನ್ವಿ, ಸದಸ್ಯರಾದ ಇಲಿಯಾಸ ಖೈರಾತಿ, ರಫೀಕ ಜಮಾಲಖಾನವರ, ಮುನ್ನಾ ಶೇಖ, ಮಹ್ಮದಹನೀಫ ಶಾಲಗಾರ, ಅಶ್ಫಾಕಅಲಿ ಹೊಸಳ್ಳಿ, ಅನ್ವರ ಶಿರಹಟ್ಟಿ, ಸೈಯದ ಖಾಲೀದ ಕೊಪ್ಪಳ, ಎಂ.ಎಂ. ಮಾಳೆಕೊಪ್ಪ, ಜೂನೇದ ಉಮಚಗಿ, ಉಮರಫಾರುಖ ಹುಬ್ಬಳ್ಳಿ, ಎಂ.ಬಿ. ನದಾಫ್ ವಕೀಲರು, ಸಮೀರ ಜಮಾದಾರ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹ್ಮದಯುಸುಫ ನಮಾಜಿ ಮಾತನಾಡಿ, ರಾಜ್ಯದಲ್ಲಿ ಎಲ್ಲರೂ ಒಂದಾಗಿ ತಮ್ಮ ಜೀವನವನ್ನು ನಡೆಸುತ್ತ ಬಂದಿದ್ದಾರೆ. ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ರಾಜಕೀಯ ಲಾಭಕ್ಕಾಗಿ ಪದೇ-ಪದೇ ಒಂದು ಸಮುದಾಯವನ್ನು ಟೀಕಿಸುವುದು, ಬೈಯುವುದು, ನಿಂದಿಸುವುದನ್ನು ಮಾಡುತ್ತ ರಾಜ್ಯದಲ್ಲಿ ಕೋಮು ಘರ್ಷಣೆಗೆ ಕುಮ್ಮಕು ನೀಡುತ್ತ ಬಂದಿದ್ದಾರೆ. ಕೂಡಲೇ ಇವರ ವಿರುದ್ಧ ಕೈಗೊಳ್ಳಬೇಕೆಂದು ಒತ್ತಾಯಿಸಿದರು.


Spread the love

LEAVE A REPLY

Please enter your comment!
Please enter your name here