ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣವೂ ಸೇರಿದಂತೆ ತಾಲೂಕಿನ ಬಹುತೇಕ ಭಾಗಗಳಲ್ಲಿ ಶುಕ್ರವಾರ ಇಳಿ ಹೊತ್ತಿಗೆ ಗಾಳಿ, ಗುಡುಗು-ಸಿಡಿಲಬ್ಬರದೊಂದಿಗೆ ಸುರಿದ ಮುಂಗಾರು ಪೂರ್ವ ಮಳೆ ಇಳೆಯನ್ನು ತಂಪಾಗಿಸಿತು.
ಶುಕ್ರವಾರ ಸಂತೆ ದಿನವಾಗಿದ್ದರಿಂದ ತರಕಾರಿ ಮಾರಾಟಗಾರರು, ರೈತರ ವ್ಯಾಪಾರ-ವಹಿವಾಟು ಸಂಪೂರ್ಣ ಅಸ್ತವ್ಯಸ್ಥಗೊಂಡಿತು. ವ್ಯಾಪಾರಕ್ಕಾಗಿ ಬಂದಿದ್ದ ಗ್ರಾಮೀಣ ಜನರು ಮಳೆಯ ಅಬ್ಬರದ ಜತೆಗೆ ಹಾಳಾದ ಕೆಸರು ರಸ್ತೆಯಲ್ಲಿ ಊರು ಸೇರಲು ಪರದಾಡಿದರು. ಪಟ್ಟಣ ಸೇರಿ ತಾಲೂಕಿನ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಂಚಾರ ದುಸ್ಥರವಾಗಿದೆ. ತಾಲೂಕಿನ ಶಿಗ್ಲಿ, ಆದ್ರಳ್ಳಿ, ಹುಲ್ಲೂರ, ಬಡ್ನಿ, ಬಟ್ಟೂರ, ದೊಡ್ಡೂರ, ಅಕ್ಕಿಗುಂದ, ಶೆಟ್ಟಿಕೇರಿ, ಸೂರಣಗಿ, ಅಡರಕಟ್ಟಿ, ಕುಂದ್ರಳ್ಳಿ, ಯತ್ನಳ್ಳಿ, ಮಾಡಳ್ಳಿ, ಯಳವತ್ತಿ, ಗೊಜನೂರ ಸೇರಿ ಅನೇಕ ಕಡೆ ಗಾಳಿಯಿಂದ ಕೂಡಿದ ಮಳೆಯಾಗಿದೆ. ಗಾಳಿ ಮಳೆಗೆ ಕೆಲ ಕಡೆ ಮರ, ಕಂಬ ಬಿದ್ದು ಕೆಲ ಹೊತ್ತು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಪ್ರಸಕ್ತ ಮುಂಗಾರು ಪೂರ್ವ ಮೊದಲ ಮಳೆ ಅಶ್ವಿನಿ ಪ್ರಾರಂಭ(ಕೂಡುವ)ವಾಗುವ ಮೊದಲೇ ಮಳೆಯ ವಾತಾವರಣ ರೈತ ಸಮುದಾಯದಲ್ಲಿ ಕೊಂಚ ಭರವಸೆ ಮೂಡಿಸಿದೆ. ಮಳೆಯಿಲ್ಲದೇ ಸುಡು ಬಿಸಿಲಿಂದ ಕಾದು ಕಬ್ಬಿಣದಂತಾಗಿರುವ ಭೂಮಿಯಲ್ಲಿ ರಂಟೆ-ಕುಂಟೆಯಿಂದ ಉಳುಮೆ ಮಾಡಲಾಗದೇ ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದ ರೈತರಿಗೆ ಈ ಮಳೆಯಿಂದ ಉಳುಮೆ ಮಾಡಲು ಅನಕೂಲವಾದಂತಾಗಿದೆ.
ಹೊಟ್ಟು-ಮೇವಿನ ಬಣವಿ ಒಟ್ಟುತ್ತಿರುವ ಮತ್ತು ನೀರಾವರಿ ಶೇಂಗಾ ಒಕ್ಕಲಿ ಮಾಡುತ್ತಿರುವ ರೈತರಿಗೆ ಮತ್ತು ಮಾವು, ವಿಳ್ಯದೆಲೆ ಸೇರಿ ತೋಟಗಾರಿಕೆ ಕೆಲ ಬೆಳೆಗಾರರಿಗೆ ಮಳೆಯಿಂದ ಕೊಂಚ ತೊಂದರೆಯೂ ಆಗಿದೆ. ಒಟ್ಟಿನಲ್ಲಿ ಮಳೆ ಬಂದರೆ ಕೇಡಲ್ಲ ಎಂಬ ಮಾತಿನಂತೆ ಬೇಸಿಗೆ ಕಾಲದಲ್ಲಿನ ಈ ಮಳೆ ಭೂಮಿಯನ್ನು ತಂಪಾಗಿಸಿದೆ.