ಬೆಂಗಳೂರು: ದೇಶದ ಭದ್ರತೆ ಮುಖ್ಯ, ರಾಜಿ ಇಲ್ಲ. ನೂರಕ್ಕೆ ನೂರು ರಾಷ್ಟ್ರದ ಜೊತೆ ಇರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಾವೇರಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಿಕಾಗೋಷ್ಠಿಗೆ ಬರುವ ವೇಳೆ ಸಿದ್ದರಾಮಯ್ಯ ಹಣೆಗೆ ದೊಡ್ಡದಾಗಿ ಸಿಂಧೂರ ಇಟ್ಟುಕೊಂಡು ಬಂದಿದ್ದು ಗಮನ ಸೆಳೆದಿದ್ದು, ನಂತರ ಮಾತನಾಡಿದರು.
ಪಹಲ್ಗಾಮ್ ದಾಳಿ ಬಳಿಕವೂ ಪಾಕಿಸ್ತಾನದ ಉಗ್ರರನ್ನ ಸದೆಬಡೆಯಲಿಲ್ಲ. ತನ್ನ ಹಠಮಾರಿತನವನ್ನ ಮುಂದುವರಿಸಿದೆ. ಹಾಗಾಗಿ ನಮ್ಮ ಸೈನಿಕರು ದಾಳಿ ಮಾಡಿದ್ದಾರೆ. ಈ ದಾಳಿಯನ್ನ ಬೆಂಬಲಿಸುತ್ತೇನೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಪಾಠ. ಉಗ್ರ ನೆಲೆಯನ್ನ ಟಾರ್ಗೆಟ್ ಮಾಡಿ ದಾಳಿ ಆಗಿದೆ. ಅಮಾಯಕರ ಸಾವು-ನೋವು ಸಂಭವಿಸಿಲ್ಲ. ಹಾಗಾಗಿ ನಮ್ಮ ಭಾರತೀಯ ಸೈನಿಕರಿಗೆ ದೊಡ್ಡ ಸಲಾಂ ಎಂದು ಕರ್ನಾಟಕ ಸರ್ಕಾರದ ಪರವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಾವು ಎಚ್ಚರ ವಹಿಸುವ ಕೆಲಸ ಮಾಡುತ್ತೇನೆ. ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಸಂಪೂರ್ಣ ಬೆಂಬಲವನ್ನ ಕೊಡುತ್ತೇವೆ. ನಮ್ಮ ರಾಜ್ಯದಲ್ಲಿ ಎಲ್ಲಾ ಎಚ್ಚರಿಕಾ ಕ್ರಮ ತೆಗೆದುಕೊಳ್ಳುತ್ತದೆ. ಉಗ್ರರ ನೆಲೆ ಮೇಲಿನ ದಾಳಿಯಿಂದಾಗಿ ರಾಯಚೂರಿನ ರ‍್ಯಾಲಿಯನ್ನ ರದ್ದುಗೊಳಿಸಿದ್ದೇವೆ.
ಕೇಂದ್ರ ಸರ್ಕಾರದ ಜೊತೆ ರಾಜ್ಯದ ಜನ ನಿಲ್ಲಬೇಕು ಎಂದು ಮನವಿ ಮಾಡುತ್ತೇನೆ ಎಂದರು. ನಮ್ಮ ರಾಜ್ಯವನ್ನ ಆಲರ್ಟ್ ಆಗಿ ಇಡಬೇಕು. ರಾಜ್ಯದಲ್ಲೂ ಮಾಕ್ ಡ್ರಿಲ್ ನಡೆಯುತ್ತಿದೆ. ರಾಷ್ಟ್ರೀಯ ಭದ್ರತೆ ಮುಖ್ಯ, ರಾಜಿ ಇಲ್ಲ. ನೂರಕ್ಕೆ ನೂರು ರಾಷ್ಟ್ರದ ಜೊತೆ ಇರುತ್ತೇವೆ ಎಂದು ಹೇಳಿದರು.