ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಹಿರಿಯ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮತ್ತು ದಿವಾಣಿ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ 380ಕ್ಕೂ ಅಧಿಕ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು.
ಪಟ್ಟಣದ ಹಿರಿಯ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ದಿವಾಣಿ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸುಮಾರು 41 ಸಿವಿಲ್ ಪ್ರಕರಣಗಳು, 260ಕ್ಕೂ ಹೆಚ್ಚಿನ ಕ್ರಿಮಿನಲ್ ಪ್ರಕರಣಗಳನ್ನು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳೆಂದು ಪರಿಗಣಿಸಿದ ಬ್ಯಾಂಕ್‌ನಿಂದ ಸಲ್ಲಿಕೆಯಾದ ಸುಮಾರು 80ಕ್ಕೂ ಹೆಚ್ಚಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಯಿತು. ವಿಶೇಷವಾಗಿ, ಸಣ್ಣ ಪುಟ್ಟ ಕಾರಣಗಳಿಂದ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಒಂದು ಜೋಡಿಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ತಿಳಿ ಹೇಳಿ ದಾಂಪತ್ಯ ಜೀವನವನ್ನು ಸರಿಪಡಿಸಲಾಯಿತು.
ನ್ಯಾಯಾಧೀಶರಾದ ಪದ್ಮಶ್ರೀ ಪಾಟೀಲ್, ಸಂಧಾನಕಾರರಾದ ಎಸ್.ಎಚ್. ಮುಳಗುಂದ ಹಾಗೂ ವಿವಾಹ ವಿಚ್ಛೇದನಕ್ಕೆ ಅರ್ಜಿಸಲ್ಲಿಸಿದ್ದವರ ಪರವಾಗಿ ಎನ್.ಸಿ. ಪಾಟೀಲ್, ಮತ್ತು ವಿ.ಕೆ. ನಾಯಕ್ ವಕೀಲರುಗಳು ಅವರಿಗೆ ತಿಳಿ ಹೇಳಿ ಅವರ ದಾಂಪತ್ಯ ಜೀವನವನ್ನು ಸರಿಪಡಿಸಿ, ಮತ್ತೆ ಉತ್ತಮವಾಗಿ ಜೀವನ ನಡೆಸಲು ತಿಳಿಸಿದರು.
ಇಬ್ಬರು ಪರಸ್ಪರ ಒಪ್ಪಿಗೆ ಸೂಚಿಸಿದ್ದರಿಂದ ಈ ಜೋಡಿಗೆ ಹಾರ ಬದಲಾಯಿಸಿ ಸಿಹಿ ನೀಡಲಾಯಿತು. ನ್ಯಾಯಾಧೀಶರಾದ ಪದ್ಮಶ್ರೀ ಪಾಟೀಲ್ ಮತ್ತು ಸತೀಶ ಎಂ. ನ್ಯಾಯಾಧೀಶರು ಈ ಜೋಡಿಯ ಹೊಸ ಜೀವನಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಸಹಾಯಕ ಅಭಿಯೋಜಕರಾದ ಹೀನಾಕೌಸರ ಗಂಜಿಹಾಳ, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ, ಬಿ.ಎಸ್. ಪಾಟೀಲ್, ಎನ್.ಐ. ಬೆಲ್ಲದ, ಎನ್.ಐ. ಸೊರಟೂರ, ಎಸ್.ಸಿ. ನರಸಮ್ಮನವರ, ಕೆ.ಬಿ. ನಾಯಕ್ ಸೇರಿದಂತೆ ಹಲವಾರು ಹಿರಿ-ಕಿರಿಯ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.