ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿರುವ ನಟ ದರ್ಶನ್ ಗೆ ಎರಡು ವಾರಗಳ ಕಾಲ ಮೈಸೂರಿಗೆ ತೆರಳಲು ನಗರದ 57ನೇ ಸಿಸಿಹೆಚ್ ನ್ಯಾಯಾಲಯ ಅನುಮತಿ ನೀಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾಗಿರುವ ದರ್ಶನ್ ಪರ ವಕೀಲರು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ಅಭಿಯೋಜಕರಿಗೆ ತಿಳಿಸಿತ್ತು. ಗುರುವಾರ ಮಧ್ಯಾಹ್ನ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಅದರ ವಿಚಾರಣೆ ನಡೆಸಿದ ಕೋರ್ಟ್ ಡಿಸೆಂಬರ್ 20ರಿಂದ ಜನವರಿ 5ರವರೆಗೆ ಮೈಸೂರಿನಲ್ಲಿ ಇರಲು ದರ್ಶನ್ ಗೆ ಅನುಮತಿ ಕೊಟ್ಟಿದೆ.
ಡಿಸೆಂಬರ್ 13ರಂದು ಹೈಕೋರ್ಟ್ ದರ್ಶನ್ ಸೇರಿ ಏಳು ಮಂದಿಗೆ ಜಾಮೀನು ನೀಡಿತ್ತು. ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳಕೂಡದು ಎಂದು ಷರತ್ತು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಮೈಸೂರಿಗೆ ತೆರಳಲು ನಾಲ್ಕು ವಾರಗಳ ಕಾಲ ಅನುಮತಿ ಕೇಳಿದ್ದರು. ದರ್ಶನ್ ಅವರು ಮೈಸೂರಿನಲ್ಲಿ ಫಾರ್ಮ್ ಹೌಸ್ ಹೊಂದಿದ್ದಾರೆ. ಹೀಗಾಗಿ ದರ್ಶನ್ ಕೆಲ ದಿನಗಳ ಕಾಲ ತಮ್ಮ ಫಾರ್ಮ್ ಹೌಸ್ ನಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ.