HomeArt and Literatureಚಿನ್ನದ ಅಂಬಾರಿಯ ಮುಕುಟಮಣಿ ಚನ್ನಯ್ಯ ಹಿರೇಮಠ

ಚಿನ್ನದ ಅಂಬಾರಿಯ ಮುಕುಟಮಣಿ ಚನ್ನಯ್ಯ ಹಿರೇಮಠ

For Dai;y Updates Join Our whatsapp Group

Spread the love

ಶ್ರೀಗಳ ಒಡನಾಡಿ, ಲಿಂಗೈಕ್ಯ ಶ್ರೀಮನ್ನಿರಂಜನ ಜಗದ್ಗುರು ತೋಂಟದ ಗುರುಬಸವ ಮಹಾಸ್ವಾಮಿಗಳು, ಲಿಂಗೈಕ್ಯ ಶ್ರೀಮನ್ನಿರಂಜನ ಜಗದ್ಗುರು ಶಿವಕುಮಾರ ಮಹಾಸ್ವಾಮಿಗಳು, ಲಿಂಗೈಕ್ಯ ಶ್ರೀಮನ್ನಿರಂಜನ ಜಗದ್ಗುರು ತೋಂಟದ ಸಿದ್ಧಲಿಂಗ ಸ್ವಾಮಿಗಳು, ಶ್ರೀಮನ್ನಿರಂಜನ ಜಗದ್ಗುರು ಪೂಜ್ಯ ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳ ಆಪ್ತರಾಗಿ ಧರ್ಮ ಅನುರಾಗಕರಾಗಿ, ಧರ್ಮಿಷ್ಟರಾಗಿ ನಡೆದು, ಆಜ್ಞಾಧಾರಕರಾಗಿ ಶ್ರೀಗಳ ಪ್ರೀತಿಪಾತ್ರರಾಗಿ ಅಘಾದ ಜ್ಞಾನವಂತರಾದ ಹಿರಿಯ ಜೀವ, ಎಂಟು ದಶಕಗಳ ಸವಿಯುಂಡ ಬಸವ ತತ್ವಗಾರರಾದ ಚನ್ನಯ್ಯ ಹಿರೇಮಠ ಇವರಿಗೆ 82ನೇ ಜನ್ಮದಿನ. ಎಂಟು ದಶಕದ ಎಂಟು ಸೂತ್ರದಾರ ಚನ್ನಯ್ಯ ಸಾರ್ಥಕ ಜೀವನದಿ.

ಬಸವಣ್ಣನವರು ಹೇಳಿದಂತೆ ಸ್ವರ್ಗ ಬೇರೆಲ್ಲೂ ಇಲ್ಲ, ಎಲ್ಲವೂ ಇಲ್ಲಿಯೇ ಇದೆ. ಈ ಜೀವನದಲ್ಲಿಯೇ ಈ ಭುವಿಯಲ್ಲಿ ನೆಲೆಸಿದ ಪ್ರತಿಯೊಂದು ಜೀವಿಗೂ ಸ್ವರ್ಗ-ನರಕಗಳ ದರ್ಶನ ಇದೆ. ನಾವು ಸನ್ಮಾರ್ಗದ ಹಾದಿಯಲ್ಲಿ ನಡೆದು ಧರ್ಮದಿಂದ ನಡೆದರೆ ಜೀವನ ಸಾರ್ಥಕ. ಸುಖ ವಿಮುಖನಾಗಿರಬೇಕು, ತೃಪ್ತನಾಗಿರಬೇಕು, ದೇವಾಸಕ್ತನಾಗಿರಬೇಕು, ಆತ್ಮಸುಖಿಯಾಗಿರಬೇಕು, ಸರ್ವಹಿತ ಬಯಸುವವನಾಗಿರಬೇಕು ಈ ಎಲ್ಲ ಮಾತುಗಳನ್ನು ಅಕ್ಷರಶಃ ಪಾಲಿಸುವವರು ನಮ್ಮ ಹೆಮ್ಮೆಯ ಚನ್ನಯ್ಯ ಹಿರೇಮಠರವರು.

ಒಂದು ದಿನ ನಾನು ನನ್ನ ಶ್ರೀ ಕಲ್ಮೇಶ್ವರ ಬೆರಳಚ್ಚು ಮತ್ತು ಗಣಕಯಂತ್ರ ವಿದ್ಯಾಲಯದಲ್ಲಿ ಕರ್ತವ್ಯದಲ್ಲಿದ್ದಾಗ ಭೇಟಿ ಕೊಟ್ಟರು. ನಾನು ವಿದ್ಯಾರ್ಥಿಗಳ ಪಾಲಕರು ಎಂದು ‘ಬನ್ನಿ ಸರ್ ಬನ್ನಿ ಒಳಗೆ ಬನ್ನಿ.. ನಮ್ಮಲ್ಲಿ ಬೆರಳಚ್ಚು ಮತ್ತು ಗಣಕಯಂತ್ರ ತರಬೇತಿ ಕೊಡುತ್ತೇವೆ. ನಿಮ್ಮ ಮಕ್ಕಳಿಗೆ ಯಾವ ವಿಷಯದಲ್ಲಿ ತರಬೇತಿ ಬೇಕು, ಹೇಳಿ..’ ಎಂದು ನಾನು ಹೇಳಿದಾಗ ಚನ್ನಯ್ಯನವರು, ನಾನು ನನ್ನ ಮಗನಿಗೆ ಬೆರಳಚ್ಚು ಕಲಿಸಬೇಕು, ಮಗನಿಗೆ ಕಳಿಸುತ್ತೇನೆ ಏನು ಬೇಕೆಂಬುದನ್ನು ನನ್ನ ಮಗನಿಗೆ ಹೇಳಿ. ಹಾಗೆಯೇ, ನಾನು ಏನನ್ನು ಕೇಳದೆ ವಿದ್ಯಾಲಯದ ಹೊರಗೆ ಬರಬೇಕಾದರೆ ನನಗೆ ಆಧರವಾಗಿ ಗೌರವದಿಂದ ಒಳಗೆ ಬನ್ನಿ ಕುಳಿತುಕೊಳ್ಳಿ ಎಂದು ಗೌರವಿಸಿದ ರೀತಿಗೆ ನಾನು ಧನ್ಯನಾದೆ. ಪಾಲಕರು ಇರಲಿ, ಯಾರೇ ಇರಲಿ ಗೌರವಿಸುವ ರೀತಿ ನನಗೆ ಮೆಚ್ಚುಗೆಯಾಯಿತು ಎಂದು ಹೇಳಿ ಹೊರಟು ಹೋದರು. ಮರುದಿನವೇ ಮಗನಿಗೆ ಪ್ರವೇಶ ಪಡೆದರು.

ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ಹೆತ್ತವರಾಗಿದ್ದರೂ, ಶಿಕ್ಷಕರಾಗಿದ್ದರೂ, ‘ಮಗುವಾಗಿ’ ಬೆರೆತಾಗ ನಿರ್ಮಲ ಮನಸ್ಸಿನ ಮಕ್ಕಳು ನಮ್ಮೊಂದಿಗೆ ಮಗುವಾಗಿ ದೇವತೆಯ ರೂಪದಲ್ಲಿ ಕಾಣುತ್ತಾರೆ. ಈ ಮಕ್ಕಳು ಬೆಳೆದು ದೊಡ್ಡವರಾಗುವುದು ಸರಿ ಅದಕ್ಕೂ ಮುಖ್ಯ ಕಾರಣಕರ್ತರು, ತಂದೆ-ತಾಯಿಗಳು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಪೋಷಕರು, ಸಮಾಜ. ಮಗುವಾಗಿ ಮಗುವಿನೊಂದಿಗೆ ನಾವು ಕಲಿಯಬೇಕು. ಪ್ರಾಮಾಣಿಕತೆ, ನಿರ್ಮಲತೆ, ಸತ್ಯ, ಮುಕ್ತತೆ, ಪ್ರೀತಿ, ತ್ಯಾಗ, ಬಲಿದಾನ ಇತ್ಯಾದಿಗಳನ್ನು ಮೈಗೂಡಿಸಿಕೊಂಡಾಗ ನಮ್ಮ ಮಕ್ಕಳು ದೇಶದ ಮಕ್ಕಳಾಗಿ ಭವಿಷ್ಯದ ನಾಗರಿಕರಾಗಿ ಬೆಳೆಯುತ್ತಾರೆ. ಅಂತಹ ಮಕ್ಕಳನ್ನು ಬೆಳೆಸಿದ ಕೀರ್ತಿ ಚನ್ನಯ್ಯ ಹಿರೇಮಠರಿಗೆ ಸಲ್ಲುತ್ತದೆ.

ಇನ್ನು, ಇವರ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ ಶ್ರೀಗಳ ಮೊದಲ ಅಭಯ ಪಡೆದ ಪುಣ್ಯದಾತರು, ಈಗಿನ ತೋಂಟದಾರ್ಯ ಕಾಲೇಜನ್ನು ದೇಣಿಗೆ ನೀಡಿದ ಶ್ರೀಗಳ ಒಡನಾಡಿ, ಅವರ ಆಪ್ತರಾಗಿ, ಧರ್ಮ ಅನುರಾಗಕರಾಗಿ, ಧರ್ಮಿಷ್ಟರಾಗಿ ನಡೆದು ಆಜ್ಞಾಧಾರಕರಾಗಿ ಶ್ರೀಗಳ ಪ್ರೀತಿಪಾತ್ರರಾಗಿ ಅಘಾದ ಜ್ಞಾನವಂತರಾದ ಚನ್ನಯ್ಯನವರು ಒಂದು ಜ್ಞಾನದ ಭಂಡಾರ. ಮಠಗಳ ಭೇಟಿ, ಶ್ರೀಗಳ ಹಿಂಬಾಲಕರಾಗಿ ಸಲಹೆ ಸೂಚನೆಗಳ ಪಾಲಕರಾಗಿ ಸದಾ ಚೈತನ್ಯದ ಚಿಲುಮೆಯಾಗಿದ್ದುಕೊಂಡು ಭಕ್ತರು ನೀಡುವ, ಶ್ರೀಗಳು ಕರುಣಿಸಿದ ಪ್ರಸಾದವೇ ಅಮೃತವೆಂದು ಸೇವಿಸಿ ತಮ್ಮ ತನು-ಮನವನ್ನು ಧರ್ಮ ರಕ್ಷಣೆಗೆ ವಿನಿಯೋಗಿಸಿದ ಧೀಮಂತ ವ್ಯಕ್ತಿತ್ವದ ಸರಳ ಸಜ್ಜನವಂತರು.

ಎಲ್ಲ ಚಿಂತನೆಗಳ ಅರೆದು ಕುಡಿಸಿ ಬೆಳೆಸಿದವರು ಹೆತ್ತವರು. ಪತ್ನಿಯ ಕೆಲಸ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು, ಸಹಾಯ ಸಹಕಾರದೊಂದಿಗೆ, ಸಂಸಾರದ ನೌಕೆಯಲ್ಲಿ ಅನ್ಯೋನ್ಯತೆಗೆ ಕೊರತೆ ಕಾಣದೆ, ಪ್ರೀತಿ, ವಿಶ್ವಾಸ ಮತ್ತು ಗುರಿಯತ್ತ ತಮ್ಮ ಪತ್ನಿಯನ್ನು ನೆನೆಯುವವರು ಚನ್ನಯ್ಯನವರು. ಶ್ರೀಮತಿಯವರ ತ್ಯಾಗ, ಪ್ರೀತಿ, ಸಹಾಯವನ್ನು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಒಂದು ಗಂಡಿನ ಯಶಸ್ಸಿನ ಹಿಂದೆ ಹೆಣ್ಣಿನ ಕೈ ಇದೆ ಎನ್ನುವ ಮಾತಿನಂತೆಯೇ, ಒಂದು ಹೆಣ್ಣಿನ ಯಶಸ್ಸಿನ ಹಿಂದೆ ಗಂಡಿನ ಕೈ ಇದೆ ಎನ್ನುವುದಕ್ಕೆ ಚನ್ನಯ್ಯನವರೇ ಸಾಕ್ಷಿ.

ಚನ್ನಯ್ಯ ಹಿರೇಮಠರವರು 80ರ ವಯಸ್ಸಿನಲ್ಲೂ ಆರೋಗ್ಯದಾತರು, ನಾಡಿನ ಎಲ್ಲ ಮಠಾಧೀಶರ ಅಭಯದಿಂದ ಇಂದು 80ರ ಚಿರಯೌವ್ವನದಲ್ಲೂ ಉತ್ಸಾಹ ಕಡಿಮೆ ಆಗಿಲ್ಲ. ನಾನು ಅವರಿಗಾಗಿಯೇ ವಿಶೇಷ “ನಡೆ ನುಡಿಯ ಚಿನ್ನದ ಅಂಬಾರಿ ಚನ್ನಯ್ಯ” 82ನೇ ಹುಟ್ಟಹಬ್ಬದ ಸವಿನೆನಪಿಗಾಗಿ ಲೇಖನ ಬರೆಯುವ ವಿಚಾರ ತಮ್ಮ ಮಾರ್ಗದರ್ಶನ ಬಯಸುತ್ತ ನೂರು ವರ್ಷ ಆರೋಗ್ಯಕರವಾಗಿ ಸುಖಕರವಾಗಿರಲಿ, ಆರೋಗ್ಯದಾಯಕ ಜೀವನ ಸಮೃದ್ಧಿದಾಯಕವಾಗಲಿ, ನೂರಾರು ವರ್ಷ ಬಾಳಲಿ, ಇವರ ಸಹ ಕುಟುಂಬ ನಗು ಸಂತೋಷದ ಅಲೆಯಲ್ಲಿ ತೇಲಲಿ, ಪೂಜ್ಯ ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳ ಅಖಂಡ ಆಶೀರ್ವಾದ ಸದಾ ಇರಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ.

  • ಡಾ. ತಯಬಅಲಿ ಅ. ಹೊಂಬಳ.
    ಮಕ್ಕಳ ಸಾಹಿತಿ, ಪ್ರಾಚಾರ್ಯರು, ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!