ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ವಿಜಯ ದಶಮಿ ಹಬ್ಬದ ದಿನ ಇಲ್ಲಿಯ ದಂಡಿನ ದುರ್ಗಾದೇವಿಯ ದಸರಾ ದರ್ಬಾರ್ ಮೆರವಣಿಗೆಯು ಜನಮನ ಸೆಳೆಯಿತು. ದುರ್ಗಾದೇವಿ ದೇವಸ್ಥಾನದಿಂದ ದೇವಿ ಮೂರ್ತಿಯನ್ನು ಹೊತ್ತ ವಾಹನದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು.
ವಾಹನದಲ್ಲಿ ನವದುರ್ಗೆಯ ಅವತಾರದ ವೇಷ-ಭೂಷಣ ಧರಿಸಿದ ಬಾಲಕಿಯರ ಮೆರವಣಿಗೆಯು ಗಮನ ಸೆಳೆಯಿತು. ಯುವಕರ ಡೊಳ್ಳು ಕುಣಿತ ಆಕರ್ಷಣೀಯವಾಗಿತ್ತು. ಕಲ್ಮಠದಲ್ಲಿ ಮುಕ್ತಾಯಗೊಂಡ ಮೆರವಣಿಗೆಯ ನಂತರ ವಿಧಿ-ವಿಧಾನಗಳೊಂದಿಗೆ ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕಳೆದ 9 ದಿನಗಳಿಂದ ನಡೆದ ನವರಾತ್ರಿಯ ದೇವಿಯ ಪುರಾಣದ ಪ್ರವಚನವನ್ನು ಕೋಟ್ರಯ್ಯ ಶಾಸ್ತ್ರೀಗಳು ನರಗುಂದಮಠ ಅವರು ಮುಕ್ತಾಯಗೊಳಿಸಿದರು. ಮಾನಪ್ಪ ಬಡಿಗೇರ ಪುರಾಣ ಪಠಣ ಮಾಡಿದರು. ಮಂಜುನಾಥ ಗರ್ಜಪ್ಪನವರ, ಈರಪ್ಪ ಕರಿಯಪ್ಪನವರ ಸಂಗೀತ ಸೇವೆ ನೀಡಿದರು. ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ನಂತರ ಅನ್ನ ಸಂತರ್ಪಣೆ ನಡೆಯಿತು.
ಸಮಿತಿಯ ಅಧ್ಯಕ್ಷ ರುದ್ರಪ್ಪ ಮುಸ್ಕಿನಭಾವಿ, ಉಪಾಧ್ಯಕ್ಷ ಎಂ.ಎನ್. ಉಮಚಗಿ, ಶಿವಪ್ಪ ಸಜ್ಜನರ, ನಜೀರಅಹ್ಮದ ಕಿರೀಟಗೇರಿ, ವೀರಯ್ಯ ಗಂಧದ, ಮಂಜುನಾಥ ಪುರದ, ಈರಪ್ಪ ಅಜಿನಾಳ, ಪ್ರೇಮಾ ಮಟ್ಟಿ, ನೀಲವ್ವ ವಡ್ಡರ, ಪಾರಮ್ಮ ಮುಸ್ಕಿನಭಾವಿ ಸೇರಿದಂತೆ ಗಣ್ಯರು, ಹಿರಿಯರು, ಯುವಕರು ಪಾಲ್ಗೊಂಡಿದ್ದರು.