ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮನುಷ್ಯ ಮನೆಯಲ್ಲಿ ಹುಟ್ಟಿ ಬೆಳೆದರೂ, ಮುಂದೆ ಅವನಿಗೆ ಬದುಕು ಸಾಗಿಸಲು ಶಿಕ್ಷಣ ಬೇಕು. ಈ ಶಿಕ್ಷಣ ನೀಡುವ ಗುರುವಿನ ಋಣ ಮನುಷ್ಯನ ಜೀವನದಲ್ಲಿ ಬಹಳಷ್ಟು ದೊಡ್ಡದಾಗಿರುತ್ತದೆ ಎಂದು ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಸಮೀಪದ ಬೂದಿಹಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1996-97 ಮತ್ತು 98ನೇ ಸಾಲಿನ ವಿದ್ಯಾರ್ಥಿಗಳು ಎಸ್.ಟಿ. ಕಳಸಾಪೂರ ಗುರುಗಳಿಗೆ ನೀಡಿದ ಗುರುವಂದನೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಗುರು ಎಂದರೆ ಕತ್ತಲೆಯನ್ನು ಕಳೆಯುವವ ಎಂದರ್ಥ. ನಮ್ಮ ಬದುಕಿನ ಕತ್ತಲೆಯನ್ನು ಕಳೆದು ಬೆಳಕನ್ನು ನೀಡಿ ನಮ್ಮ ಜೀವನವನ್ನು ಉದ್ಧರಿಸುವ ಗುರುವನ್ನು ನಾವೆಂದಿಗೂ ಮರೆಯಬಾರದು. ಈ ಉದ್ದೇಶದಿಂದ ಕಳಸಾಪೂರ ಗುರುಗಳ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಅವರಿಗೆ ಗುರು ವಂದನೆ ಸಲ್ಲಿಸಿರುವುದು ಅತ್ಯಂತ ಸೂಕ್ತವಾದ ಕಾರ್ಯ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಮಾತನಾಡಿ, ಗುರುವಿನ ನೆನಪು ಜೀವನದಲ್ಲಿ ಅಮೃತದ ಧಾರೆಯಿದ್ದಂತೆ. ನಮಗೆ ಬದುಕು ನೀಡಿ ನಮ್ಮ ವ್ಯಕ್ತಿತ್ವ ವಿಕಸನವಾಗಲು ಸಹಾಯ ಮಾಡುವ ಗುರುವನ್ನು ನಾವೆಂದಿಗೂ ಮರೆಯಬಾರದು. ಮನೆಯಲ್ಲಿ ತಂದೆ-ತಾಯಿಗಳು ನಮಗೆ ಜನ್ಮ ನೀಡಿದ ಗುರುಗಳಾದರೆ, ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಗುರು ಇನ್ನೊಬ್ಬ ದೇವರಾಗುತ್ತಾನೆ. ಅವನನ್ನು ನಿತ್ಯವೂ ಸ್ಮರಿಸಿ ನಮ್ಮ ಜೀವನವನ್ನು ಪಾವನ ಮಾಡಿಕೊಳ್ಳಲು ಇಂತಹ ಗುರುವಂದನೆ ಕಾರ್ಯಗಳು ನಡೆಯುತ್ತಿವೆ ಎಂದರು.
ಶಿವನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಬಿ.ವಿ. ದೇಸಾಯಿಪಟ್ಟಿ, ಸಿಆರ್‌ಪಿ ಎಸ್.ಆರ್. ಮೂಲಿಮನಿ, ಶಿಕ್ಷಕ ಸಿ.ಕೆ. ಕೇಸರಿ, ಅತಿಥಿ ಶಿಕ್ಷಕಿಯರಾದ ಐಶ್ವರ್ಯ ಬಿಂಗಿ, ದೀಪಾ ಪೂಜಾರ ಮತ್ತು ಕಾವ್ಯಾ ಮರಲಿಂಗಣ್ಣವರ, ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪಗೌಡ ಬರಮಗೌಡ್ರ, ಗ್ರಾಮಸ್ಥರು ಪಾಲ್ಗೊಂಡಿದ್ದರು. ಸಿದ್ದಶಾಸ್ತ್ರಿಗಳು ಹಡಗಲಿ ಸ್ವಾಗತಿಸಿದರು. ಬಸವರಾಜ ಮಂಡಲಗೇರಿ ನಿರೂಪಿಸಿದರು. ಮಲ್ಲಯ್ಯ ನಪುರಿ ವಂದಿಸಿದರು.