ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಮ್ಮ ಶ್ರೀಮಠದಲ್ಲಿ ಬಹಳ ದಿನಗಳಿಂದಲೂ ಕನ್ನಡ ಸೇವೆಯನ್ನು ಮಾಡುವ, ಕನ್ನಡದ ಯಾವುದಾದರೊಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂಬ ಅಭಿಲಾಷೆ ನಮಗಿತ್ತು. ಅದಕ್ಕೆ ಈ ಸಾರೆಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಗಜೇಂದ್ರಗಡ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ದೊರೆತಿರುವುದು ನಮ್ಮೆಲ್ಲ ಸದ್ಭಕ್ತರ ಸೌಭಾಗ್ಯ ಎಂದು ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳವರು ಹೇಳಿದರು.
ನಿಡಗುಂದಿ ಗ್ರಾಮದ ಶ್ರೀ ಜೋಡು ಬಸವೇಶ್ವರ ದೇವಸ್ಥಾನದ ಬಳಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಸರ್ವಾಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಬೇಕೆನ್ನುವ ವಿಚಾರ ಬಂದಾಗ ಮುನ್ನೆಲೆಗೆ ಬಂದ ಹೆಸರು ನಮ್ಮ ಗುರುಗಳಾದ ಎಂ.ಎ. ಹಿರೆವಡೆಯರದ್ದು. ವಯೋವೃದ್ಧರು, ಜ್ಞಾನವೃದ್ಧರಾದ ಅವರ ಆಯ್ಕೆ ಸೂಕ್ತ ಎಂದು ಎಲ್ಲರಿಗೂ ಅನ್ನಿಸಿದ್ದರಿಂದ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇಂದು ನಮ್ಮ ಗುರುಗಳ ಮೆರವಣಿಗೆಗೆ ಚಾಲನೆ ನೀಡುವ ಸೌಭಾಗ್ಯ ನನ್ನದಾಗಿರುವುದು ನನಗೆ ಅತೀವ ಆನಂದವನ್ನುಂಟು ಮಾಡಿದೆ ಎಂದರು.
ನಿಡಗುಂದಿಯ ಪ್ರಮುಖ ಬೀದಿಗಳಲ್ಲಿ ಸರ್ವಾಧ್ಯಕ್ಷರ ಮೆರವಣಿಗೆಯು ಸಂಚರಿಸಿತು. ಹಿರೇಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ನಾಡಿನ ಅನೇಕ ಶ್ರೀಗಳು, ಅಂದಪ್ಪ ಬಿಚ್ಚೂರ, ಪಿ.ಕೆ. ಕರಡಿ, ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ತಾಲೂಕಾಧ್ಯಕ್ಷ ಅಮರೇಶ ಗಾಣಿಗೇರ, ಹೋಬಳಿ ಘಟಕದ ಅಧ್ಯಕ್ಷ ಎಂ.ವಿ. ವೀರಾಪೂರ, ಜಗದೀಶ ಕರಡಿ, ಫಕೀರಪ್ಪ ಕುಕನೂರ, ವೀರನಗೌಡ ಪಾಟೀಲ, ಶಂಕ್ರಯ್ಯ ಹಿರೇಮಠ, ದರ್ಶನ ಡುಮ್ಮನವರ, ಸಂಗಯ್ಯ ಭೂಸನೂರಮಠ, ಪರಪ್ಪ ಅಣಗೌಡ್ರ, ರಮೇಶ ಅಣಗೌಡ್ರ, ಮಲ್ಲನಗೌಡ ಪಾಟೀಲ, ಶರಣಯ್ಯ ಮಠಪತಿ, ರಾಜು ಬಾಣದ, ಬಸವರಾಜ ಮಲೀನಕೊಪ್ಪ, ಕುಬೇರಪ್ಪ ಗಡಾದ ನರೇಗಲ್ಲ, ನಿಡಗುಂದಿಕೊಪ್ಪ, ಹಾಲಕೆರೆ, ಜಕ್ಕಲಿ ಮತ್ತಿತರ ಗ್ರಾಮಗಳ ಅನೇಕ ಸಾಹಿತ್ಯಾಸಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಧುರೀಣ ಮಿಥುನ್ ಪಾಟೀಲ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ವ್ಯಕ್ತಿಯ ವಿಕಸನಕ್ಕೆ ಸಹಾಯ ಮಾಡುತ್ತವೆ. ತಾಲೂಕಿನ ಹಿರಿಕಿರಿಯ ಸಾಹಿತಿಗಳು ಈ ಸಮ್ಮೇಳನದ ಲಾಭವನ್ನು ಪಡೆದುಕೊಂಡು ತಮ್ಮ ಪ್ರತಿಭೆಯನ್ನು ಹೊರ ಹಾಕಲು ಅನುಕೂಲವಾಗುತ್ತದೆ. ಇದರಿಂದ ನಮ್ಮ ತಾಲೂಕಿನಲ್ಲಿರುವ ಸಾಹಿತಿಗಳು ಯಾರು, ಉದಯೋನ್ಮುಖರು ಯಾರು ಎಂಬುದನ್ನು ಅರಿಯಲು ಸಹಾಯಕವಾಗುತ್ತದೆ ಎಂದರು.