ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಕಳೆದ ಶನಿವಾರ ಪ್ರತಿಷ್ಠಾಪನೆಗೊಂಡಿದ್ದ ಗಣೇಶನ ಮೂರ್ತಿಗಳಿಗೆ 5ನೇ ದಿನವಾದ ಬುಧವಾರ ವಿದಾಯ ಹೇಳಲಾಯಿತು.
ಪಟ್ಟಣದಲ್ಲಿ ಬಹುತೇಕ ಮನೆಗಳಲ್ಲಿ ಗಣೇಶ ಮೂರ್ತಿಗಳು ವಿಸರ್ಜನೆಗೊಂಡರೆ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪನೆಗೊಂಡಿದ್ದ ನೂರಾರು ಸಾರ್ವಜನಿಕ ಗಣೇಶ ಮೂರ್ತಿಗಳು 5ನೇ ದಿನವೇ ವಿಸರ್ಜನೆಗೊಂಡವು. ಗಣೇಶನ ವಿಸರ್ಜನೆಯ ಬಂದೋಬಸ್ತ್ಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಗಳು ಮದ್ಯಾಹ್ನದ ವೇಳೆಗೆ ಶಿಗ್ಲಿ ನಾಕಾ ಬಳಿ ಪುರಸಭೆಯಿಂದ ನಿರ್ಮಿಸಲಾಗಿದ್ದ ತಾತ್ಕಾಲಿಕ ನೀರಿನ ಗುಂಡಿಗಳಿಗೆ ಗಣೇಶ ಮೂರ್ತಿಯನ್ನು ಮೊದಲನೆಯವರಾಗಿ ವಿಸರ್ಜಿಸಿದರು. ಪಿಎಸ್‌ಐ ಈರಪ್ಪ ರಿತ್ತಿ ಮತ್ತು ಕ್ರೈಮ್ ವಿಭಾಗದ ಪಿಎಸ್‌ಐ ಮಾರುತಿ ಜೋಗದಂಡಿನ, ಎಎಸ್‌ಐಗಳು, ಪೊಲೀಸ್ ಸಿಬ್ಬಂದಿಗಳು ಡೊಳ್ಳು ಕಟ್ಟಿಕೊಂಡು ಕುಣಿದು ಸಂಪ್ರದಾಯದಂತೆ ಮೆರವಣಿಗೆ ಮೂಲಕ ವಿಸರ್ಜನೆ ನೆರವೇರಿಸಿ ಗಮನ ಸೆಳೆದರು.
ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಇನ್ನಿತರೆ ಅಧಿಕಾರಿಗಳು ಬಂದೋಬಸ್ತ್ನಲ್ಲಿ ಪಾಲ್ಗೊಂಡಿದ್ದರು.