ವಿಜಯಸಾಕ್ಷಿ ಸುದ್ದಿ, ಗದಗ: ಭಾರತ ದೇಶವನ್ನು ಹಿಂದೂ ಸಂಸ್ಕೃತಿಯಿಂದ ಬೇರ್ಪಡಿಸುವ ಹುನ್ನಾರ ಹೊಂದಿರುವ ವಿಭಜಕ ಶಕ್ತಿಗಳು ಸದ್ಯ ಧಾರ್ಮಿಕ ಕೇಂದ್ರಗಳ ಮೇಲೆ ತಮ್ಮ ವಕ್ರದೃಷ್ಟಿ ನೆಟ್ಟಿವೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇವಾಲಯಗಳು ನಮ್ಮ ಸಂಸ್ಕೃತಿಯ ಹೆಗ್ಗುರುತುಗಳಾಗಿದ್ದು, ನಮ್ಮ ಆಚಾರ-ವಿಚಾರ, ಸಂಪ್ರದಾಯಗಳನ್ನು ಒಳಗೊಂಡ ನಮ್ಮ ದೇಶದ ಅಸ್ಮಿತೆಗಳಾಗಿವೆ. ಬಹುಸಂಖ್ಯಾತ ಹಿಂದೂ ಸಮುದಾಯದ ಪಾಲಿಗೆ ದೇವಾಲಯಗಳು ಪವಿತ್ರ ಕ್ಷೇತ್ರಗಳಾದ ಕಾರಣ ಅವುಗಳ ಕುರಿತು ಜನರಲ್ಲಿ ಕೀಳರಿಮೆ ಹುಟ್ಟುವಂತೆ ಪ್ರಯತ್ನಗಳು ನಡೆಯುತ್ತಲೇ ಇವೆ. ಇಂಥಹ ಪಿತೂರಿಯ ಕುರಿತು ಜನರು ಜಾಗೃತರಾಗಬೇಕಿದೆ.
ಸದ್ಯ, ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಕೀರ್ತಿಗೆ ಮಸಿ ಬಳಿಯಲು ದೇಶದ್ರೋಹಿಗಳು ಶತಪ್ರಯತ್ನ ನಡೆಸಿದ್ದು, ಯಾವುದೇ ಸಾಕ್ಷಿ-ಆಧಾರಗಳಿಲ್ಲದಿದ್ದರೂ ಸರಣಿ ಕೊಲೆ, ಅತ್ಯಾಚಾರ ಎಂದು ಕಟ್ಟುಕಥೆಗಳನ್ನು ಹರಿಬಿಟ್ಟು ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ಈ ಪ್ರಕರಣವನ್ನು ಎಸ್.ಐ.ಟಿಗೆ ಒಪ್ಪಿಸಿ ಸದ್ಯ ಮುಖಭಂಗಕ್ಕೆ ಒಳಗಾಗಿದೆ. ಸತತ ತನಿಖೆ ಬಳಿಕ ಅಲ್ಲಿ ಯಾವುದೇ ಸಾಕ್ಷಿ ಪುರಾವೆ ಸಿಗದಿದ್ದರೂ ತಪ್ಪು ಮಾಹಿತಿ ನೀಡಿದವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಧಾರ್ಮಿಕ ಆಚರಣೆಗಳನ್ನು ಅಳಿಸಿಹಾಕುವ ಮೂಲಕ ಇಲ್ಲಿನ ಜನರ ಮೇಲೆ ಸವಾರಿ ಮಾಡಬಹುದು ಎನ್ನುವುದು ಕಮ್ಯುನಿಸ್ಟರ ಧ್ಯೇಯವಾಗಿದೆ. ಹಿಂದೂ ಸಮಾಜ ಎಚ್ಚೆತ್ತುಕೊಳ್ಳುವ ಕಾಲ ಇದಾಗಿದ್ದು, ನಮ್ಮ ಪರಂಪರೆಯ ಶ್ರೇಷ್ಠತೆಗೆ ಭಂಗ ತರುತ್ತಿರುವವರ ವಿರುದ್ಧ ಧ್ವನಿ ಎತ್ತಿ ಅವರಿಗೆ ತಕ್ಕ ಶಾಸ್ತಿ ಮಾಡಬೇಕಿದೆ ಎಂದು ತಿಳಿಸಿದ್ದಾರೆ.