ಅನಾನುಕೂಲಗಳಾಗದಂತೆ ಕ್ರಮವಹಿಸಿ

0
rona
Spread the love

ವಿಜಯಸಾಕ್ಷಿ ಸುದ್ದಿ, ರೋಣ : ಫೆ.29ರಂದು ಸರಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶಕ್ಕೆ ಆಗಮಿಸುವ ನಾಗರಿಕರ ಹಿತದೃಷ್ಟಿಯಿಂದ ಕುಡಿಯುವ ನೀರು ಹಾಗೂ ಆಹಾರ ವಿತರಣೆ ಸಂದರ್ಭದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸೂಚಿಸಿದರು.

Advertisement

ಅವರು ಸೋಮವಾರ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿದೆ. ಯಾವುದೇ ಕಾರಣಕ್ಕೂ ಯಾರಿಗೂ ಸಹ ತೊಂದರೆಯಾಗಬಾರದು. ಮುಖ್ಯವಾಗಿ ಸಂಚಾರಕ್ಕೆ ಅನಾನುಕೂಲವಾಗಬಾರದು ಎಂದ ಅವರು, ಸಮಾವೇಶಕ್ಕೆ ಬರುವ ವಾಹನಗಳನ್ನು ಬೇರೆ ಕಡೆ ನಿಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.

ಸರಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಫಲಾನುಭವಿಗಳಿಗೆ ಮಾಹಿತಿಯನ್ನು ಒದಗಿಸುವ ಕಾರ್ಯವನ್ನು ಸಮಾವೇಶದಲ್ಲಿ ಮಾಡಬೇಕು. ನರೆಗಲ್ಲ, ರೋಣ, ಗಜೇಂದ್ರಗಡ ಪಟ್ಟಣಗಳ ಪುರಸಭೆಯ ಮುಖ್ಯಾಧಿಕಾರಿಗಳು ತಮ್ಮ ಗ್ರಾಮಗಳಲ್ಲಿ ಸಮಾವೇಶದ ಕುರಿತು ಸಾರ್ವಜನಿಕರಿಗೆ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಸಭೆಯ ನಂತರ ಜಿಲ್ಲಾಧಿಕಾರಿಗಳು ಸಮಾವೇಶ ನಡೆಯುವ ಸ್ಥಳವನ್ನು ವೀಕ್ಷಿಸಿ ಮಾಹಿತಿ ಪಡೆದರು.
ತಹಸೀಲ್ದಾರ್ ನಾಗರಾಜ ಕೆ., ಇಓಗಳಾದ ರವಿ ಎ.ಎನ್., ಡಿ ಮೋಹನ್, ಪಿಎಸ್‌ಐ ಎಲ್.ಕೆ. ಜೂಲಕಟ್ಟಿ, ಜಗದೀಶ ಮಡಿವಾಳ, ಗಿರೀಶ ಹೊಸುರ, ರವೀಂದ್ರ ಪಾಟೀಲ, ಬಲರಾಮ್ ನಾಯ್ಕರ, ಮೀನಾ ರತ್ನಾಕರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾಧ್ಯಮದವರಿಗೆ ತೊಂದರೆಯಾಗದಂತೆ ನಿಗಾ ವಹಿಸಿ

ಕಳೆದ ಬಾರಿ ರೋಣದಲ್ಲಿ ಪಲಾನುಭವಿಗಳ ಸಮಾವೇಶವನ್ನು ಹಮ್ಮಿಕೊಂಡಾಗ ಮಾಧ್ಯಮ ಪ್ರತಿನಿಧಿಗಳಿಗೆ ತೊಂದರೆಯಾಗಿತ್ತು. ಅಂತಹ ಘಟನೆಗಳು ಮತ್ತೆ ಮರುಕಳಿಸಬಾರದು. ಅಲ್ಲದೆ ಮಾಧ್ಯಮದವರಿಗೆ ಮೀಸಲಾಗಿರುವ ಸ್ಥಳದಲ್ಲಿ ಯಾರನ್ನೂ ಬಿಡಬೇಡಿ. ಸರಕಾರಿ ಕಾರ್ಯಕ್ರಮವಾಗಿದ್ದರಿಂದ ಯಶಸ್ವಿಯಾಗಿ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


Spread the love

LEAVE A REPLY

Please enter your comment!
Please enter your name here