HomeGadag Newsಜಿಲ್ಲಾ ಪೊಲೀಸ್ ಇಲಾಖೆ ಶಿಸ್ತಿಗೆ ಹೆಸರುವಾಸಿ

ಜಿಲ್ಲಾ ಪೊಲೀಸ್ ಇಲಾಖೆ ಶಿಸ್ತಿಗೆ ಹೆಸರುವಾಸಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದಲ್ಲಿಯೇ ಗದಗ ಜಿಲ್ಲೆಯಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ಮೊಟ್ಟಮೊದಲ ಬಾರಿಗೆ ಜಾರಿಗೊಳಿಸಿ ಜನರನ್ನು ಮತ್ತು ಜನರ ಆಸ್ತಿಯನ್ನು ರಕ್ಷಿಸುವಲ್ಲಿ ಪೊಲೀಸ್ ಇಲಾಖೆ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಶಹರ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಕೀಲಿ ಹಾಕಿದ ಮನೆಗಳ ಕಣ್ಗಾವಲು ವ್ಯವಸ್ಥೆ ಹಾಗೂ ಪೊಲೀಸ್ ಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನೆಗಳ್ಳತನ ತಡೆಯುವುದಕ್ಕೆ ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಕಣ್ಗಾವಲು ವ್ಯವಸ್ಥೆ ಆರಂಭಿಸಿ ಜನರ ಆಸ್ತಿಯನ್ನು ಸಂರಕ್ಷಿಸಿ ಕಳ್ಳತನ ಮಾಡುವರಿಗೆ ತಕ್ಕ ಶಾಸ್ತಿ ಮಾಡುವ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ಪೊಲೀಸ್ ಇಲಾಖೆ ಅತ್ಯಂತ ಕಾಳಜಿ ವಹಿಸಿ ಗಂಭೀರವಾಗಿ ಕಾರ್ಯ ಪ್ರವೃತ್ತರಾಗಿದ್ದು, ಈಗಾಗಲೇ ಯೋಜನೆಗೆ ಬೇಕಾದ ಅಗತ್ಯ ಉಪಕರಣಗಳನ್ನು ಒದಗಿಸಲು ಪ್ರಾರಂಭಿಸಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ಈಗಾಗಲೇ ಥರ್ಡ್ ಐ ಯೋಜನೆ ಜಾರಿಗೊಳಿಸುವ ಮೂಲಕ ಜನಸಾಮಾನ್ಯರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಜಾಗೃತಿ ಮೂಡಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಥರ್ಡ್ ಐ ಜಾರಿಯಿಂದ ಕಾನೂನು ಸುವ್ಯವಸ್ಥೆ ಸರಿಯಾದ ಕ್ರಮದಲ್ಲಿ ಸಾಗುತ್ತಿದ್ದು, ಪ್ರಕರಣಗಳನ್ನು ಶೀಘ್ರವಾಗಿ ಕಂಡು ಹಿಡಿಯಲು ಸಹಕಾರಿಯಾಗಿದೆ. ನಗರದ ಜನನಿಬಿಡ ಹೊಸ ಬಡಾವಣೆಗಳಲ್ಲಿ ಮನೆಗಳ್ಳತನ ಪ್ರಕರಣಗಳ ತಡೆಗೆ ಈ ಕಣ್ಗಾವಲು ವ್ಯವಸ್ಥೆ ಅತ್ಯಂತ ಸಹಕಾರಿಯಾಗಿದೆ. ಜನಸಮಾನ್ಯರ ಮನೆ ಹಾಗೂ ಆಸ್ತಿ ರಕ್ಷಣೆ ಮಾಡುವ ಕಾರ್ಯವನ್ನು ಪೊಲೀಸ್ ಇಲಾಖೆ ಈ ಕಣ್ಗಾವಲು ವ್ಯವಸ್ಥೆ ಮೂಲಕವೂ ಮಾಡಬಹುದಾಗಿದೆ. ಇದಕ್ಕಾಗಿ ಪೊಲೀಸ್ ಇಲಾಖೆಯನ್ನು ಅಭಿನಂದಿಸುತ್ತೇನೆ ಎಂದರು.

hkp

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಜಿಲ್ಲೆಯಲ್ಲಿ ಅಪರಾಧಗಳನ್ನು ತಡೆಗಟ್ಟಲು ಕಣ್ಗಾವಲು ವ್ಯವಸ್ಥೆಯಿಂದ ಬೀಗಹಾಕಿದ ಮನೆಗಳ ನಿಗಾವಹಿಸಲು ಉಪಯುಕ್ತವಾಗಿದೆ.

ಸಹಾಯವಾಣಿ-9480021100 ಸಂಖ್ಯೆಗೆ HELP ಎಂದು ವಾಟ್ಸಪ್ ಮಾಡಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸಂಕದ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಗಣ್ಯರಾದ ಡಾ.ನಾಗನೂರ, ಪ್ರಭು ಬುರಬುರೆ, ಎಸ್.ಎನ್. ಬಳ್ಳಾರಿ, ಅಶೋಕ ಮಂದಾಲಿ, ಭಾಷಾ ಮಲ್ಲಸಮುದ್ರ ಹಾಜರಿದ್ದರು.

ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸೌಜನ್ಯದಿಂದ ಕಾರ್ಯನಿರ್ವಹಿಸುವ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಮುಂದಾಗಲಿ. ಪೊಲೀಸ್ ಇಲಾಖೆಯಲ್ಲಿನ ತಾಂತ್ರಿಕ ಆಧುನೀಕರಣಕ್ಕೆ ಅಗತ್ಯವಿರುವ ಸಂಪೂರ್ಣ ಬೆಂಬಲವನ್ನು ನೀಡಲಾಗುವುದು. ಸಮಾಜದಲ್ಲಿ ಶಾಂತಿ, ಸುರಕ್ಷತೆ, ಸಮಾಧಾನ ತರಲು ಪೊಲೀಸ್ ಅಧಿಕಾರಿಗಳು ಜನಸ್ನೇಹಿ ಕಾರ್ಯಗಳ ಮೂಲಕ ಸಾಧ್ಯವಾಗಿಸಬಹುದಾಗಿದೆ. ಪೊಲೀಸರೂ ಸಹ ಸಮಾಜ ಸೇವಕರು. ನೀವು ಮಾಡುವ ಒಳ್ಳೆಯ ಕಾರ್ಯ ಸರ್ಕಾರಕ್ಕೆ ಕೀರ್ತಿ ತರಲಿದೆ. ಸಂಸ್ಕೃತಿ, ಸೇವೆ, ಶಿಸ್ತಿಗೆ ಗದಗ ಜಿಲ್ಲೆಯ ಪೊಲೀಸ್ ಇಲಾಖೆ ಹೆಸರುವಾಸಿಯಾಗಿದೆ.
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.

ಪೊಲೀಸ್ ಜಾಗೃತಿ ವಾಹನದ ಮೂಲಕ ಮನೆ ಕಳ್ಳತನ, ಸರ ಕಳ್ಳತನ, ವಾಹನ ಕಳವು, ಮಾದಕ ವಸ್ತುಗಳ ದುರ್ಬಳಕೆ, ಸಂಚಾರಿ ನಿಯಮದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಗದಗ ಜಿಲ್ಲಾ ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದೆ. ಸೈಬರ್ ಅಪರಾಧಗಳು ನಡೆದಲ್ಲಿ ಸಹಾಯವಾಣಿ ಸಂಖ್ಯೆ-1930, ತುರ್ತು ಸಂದರ್ಭದಲ್ಲಿ ತುರ್ತು ಸಹಾಯವಾಣಿ-112ಗೆ ಸಾರ್ವಜನಿಕರು ಕರೆ ಮಾಡಿ ಸಹಾಯ ಪಡೆಯುವಂತೆ ಎಸ್‌ಪಿ ಬಿ.ಎಸ್. ನೇಮಗೌಡ ತಿಳಿಸಿದರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!