ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮುಳಗುಂದ ನಾಕಾ ಬಳಿಯ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ರಥವನ್ನು ಮುತ್ತೈದೆಯರು ಎಳೆಯುವ ಮೂಲಕ 11ನೇ ವರ್ಷದ ಜಾತ್ರೆಗೆ ಚಾಲನೆ ನೀಡಿದರು.
ಶ್ರೀಮಠದ ಲಿಂ.ಶರಣಯ್ಯ ಸ್ವಾಮಿಗಳವರು ಮಹಿಳೆಯರಿಂದಲೇ ಅನ್ನಪೂರ್ಣೇಶ್ವರಿ ರಥವನ್ನು ಎಳೆಸಬೇಕು ಎಂಬ ಸಂಕಲ್ಪ ಮಾಡಿದ್ದು, ಅವರ ಸಂಕಲ್ಪವನ್ನು ಸದ್ಯ ಶ್ರೀಮಠದ ಧರ್ಮಾಧಿಕಾರಿಗಳಾದ ವೇದಮೂರ್ತಿ ಮಹೇಶ್ವ ಸ್ವಾಮಿಗಳು ಸಾಕಾರಗೊಳಿಸಿದ್ದಾರೆ.
ಭಾರತೀಯ ಪರಂಪರೆ, ಸನಾತನ ಧರ್ಮದಲ್ಲಿ ಮಹಿಳೆಯರಿಗೆ ಅಗ್ರ ಸ್ಥಾನವಿದೆ. ಗದುಗಿನ ಅಡವೀಂದ್ರ ಸ್ವಾಮಿಗಳ ಮಠದ ಅಧಿದೇವತೆ ಮಾತಾ ಅನ್ನಪೂರ್ಣೆಯಾಗಿರುವದರಿಂದ ಶ್ರೀಮಠದಲ್ಲಿ ಶಕ್ತಿ ದೇವತೆಯ ಪ್ರಮುಖ ಹಬ್ಬವಾದ ನವರಾತ್ರಿಯಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಮುತ್ತೈದೆಯರಿಗೆ ಪ್ರಥಮ ಆದ್ಯತೆ.
ಅಡವೀಂದ್ರಸ್ವಾಮಿಗಳ ಮಠ ಸ್ಥಾಪನೆಯಾದಾಗಿನಿಂದ ಇಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ಹಾಗೂ ಪ್ರಾಶಸ್ತ್ಯವನ್ನು ನೀಡಿದ್ದು, ಪೂರ್ವಜರಾದ ಲಿಂ. ಶ್ರೀಶರಣಯ್ಯಾ ಸ್ವಾಮಿಗಳ ಆಶಿರ್ವಾದದೊಂದಿಗೆ, ಶಮಿ, ಆರಿ, ಬಿಲ್ವ, ವೃಕ್ಷಗಳ ಸಂಗಮವಾದ ಶ್ರೀಮಠದಲ್ಲಿ ಅನೂಚಾನವಾಗಿ ಮುನ್ನಡೆಸುತ್ತಾ ಬರಲಾಗಿದೆ. ಇದು ಅಪರೂಪದಲ್ಲಿಯೇ ಅಪರೂಪದ ಜಾತ್ರೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳದೇ ಇರುವವರೇ ವಂಚಿತರು.
2025ರ 45ನೇ ವರ್ಷದ ನವರಾತ್ರಿಯ ಶ್ರೀದೇವಿ ಪುರಾಣ ಪ್ರವಚನವನ್ನು ಡಾ. ರಾಜಗುರು ಶ್ರೀಗುರುಸ್ವಾಮಿ ಕಲಕೇರಿ ಗವಾಯಿಗಳು, ಸುಕ್ರುಸಾಬ ಮುಲ್ಲಾ ಹಾರ್ಮೋನಿಯಂ, ಶರಣಪ್ಪ ಗುತ್ತರಗಿ ತಬಲಾ ಸಾಥ್‌ನೊಂದಿಗೆ ಭಕ್ತರ ಮನಮುಟ್ಟುವಂತೆ ನಡೆಸಿಕೊಟ್ಟರು.
ಉತ್ಸವದ ಅಂಗವಾಗಿ ಹಲವಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕುಮಾರಿಕಾ, ಮುತ್ತೈದೆಯರಿಗೆ ಬಾಗಿನ ಸಮರ್ಪಿಸುವುದರೊಂದಿಗೆ ಪಾದಪೂಜೆ ಮಾಡಲಾಯಿತು. 11ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಧರ್ಮದರ್ಶಿಗಳಾದ ಮಹೇಶ್ವರ ಸ್ವಾಮಿಗಳು ಮಾರ್ಗದರ್ಶನ ಮಾಡಿದರು. ಈ ವರ್ಷದ ಜಾತ್ರಾ ಮಹೋತ್ಸವದ ಸಾನ್ನಿಧ್ಯವನ್ನು ಶ್ರೀನಿರಂಜನಪ್ರಭು ಡಾ. ಚನ್ನಮಲ್ಲ ಮಹಾಸ್ವಾಮಿಗಳು ಸುವರ್ಣಗಿರಿ ಸಂಸ್ಥಾನ ವಿರಕ್ತಮಠ (ಕಲ್ಮಠ) ಕನಕಗಿರಿ ಇವರು ವಹಿಸಿದ್ದರು.
ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಸದಾಶಿವಯ್ಯ ಮದರಿಮಠ, ಪ್ರಧಾನ ಕಾರ್ಯದರ್ಶಿಯಾಗಿ ಶರಣಬಸಪ್ಪ ಗುಡಿಮನಿ, ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಸುವರ್ಣಾ ಮದರಿಮಠ, ಕಾರ್ಯದರ್ಶಿಯಾಗಿ ಗೀತಾ ಹೂಗಾರ ಕಾರ್ಯ ನಿರ್ವಹಿಸಿದರು.



