ಸಸಿಗಳನ್ನೇ ಮಕ್ಕಳೇಂದು ಬೆಳೆಸಿದ ವೃಕ್ಷ ಮಾತೆ, ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ವಿಧಿವಶರಾಗಿರುವುದು ವೃಕ್ಷಮಾತೆಯನ್ನು ಕಳೆದುಕೊಂಡು ಪರಿಸರ ಲೋಕ ಅನಾಥವಾಗಿದೆ.
114 ವರ್ಷಗಳ ಸಂತೃಪ್ತ ಜೀವನ ಅವರದ್ದಾಗಿತ್ತು. ಅಷ್ಟೇ ಅಲ್ಲ, ಇವರು ದೇಶ ಕಂಡ ಪ್ರಸಿದ್ಧ ಪರಿಸರವಾದಿಗಳು ಎಂದರೆ ತಪ್ಪೇನಿಲ್ಲ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ 1911 ಜೂನ್ 30ರಂದು ಜನಿಸಿದರು. ನಂತರ ಮಾಗಡಿ ತಾಲೂಕಿನ ಚಿಕ್ಕಯ್ಯ ಎಂಬುವವರನ್ನು ವಿವಾಹವಾದರು. ಆದರೆ ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ಕುದೂರಿನಿಂದ ಹುಲಿಕಲ್ ತನಕವಿರುವ ರಾಜ್ಯ ಹೆದ್ದಾರಿ 94ರಲ್ಲಿ 385 ಆಲದ ಮರಗಳನ್ನು ಬೆಳೆಸಿದರು. ತಮ್ಮ ಪ್ರದೇಶದಲ್ಲಿ 8 ಸಾವಿರಕ್ಕೂ ಹೆಚ್ಚು ಮರಗಳನ್ನು ನೆಟ್ಟರು.
ಹೀಗಾಗಿ ಅವರನ್ನು ವೃಕ್ಷಮಾತೆ ಎಂದೇ ಕರೆಯಲಾಗುತ್ತದೆ. ಅವರು ನೆಟ್ಟು ಬೆಳೆಸಿದ ಗಿಡಗಳಿಂದಾಗಿ ಹಸಿರು ಹೆಚ್ಚಿತು, ಮಣ್ಣಿನ ಸವೆತವನ್ನು ತಡೆಗಟ್ಟಿತು ಮತ್ತು ಶುದ್ಧ ಪರಿಸರವನ್ನು ಸೃಷ್ಟಿಸಿತು. ಆ ಆಲದ ಮರಗಳು ಇಂದಿಗೂ ಕೂಡ ನೂರಾರು ಪಕ್ಷಿ ಸಂಕುಲಕ್ಕೆ ಆಶ್ರಯ ನೀಡಿವೆ. ಸುಡು ಬಿಸಿಲಲ್ಲಿ ಬಸವಳಿದವರಿಗೆ ತಂಪಾದ ನೆರಳನ್ನು ಒದಗಿಸುತ್ತಿವೆ. ಇವರಿಂದ ಪ್ರೇರಣೆ ಪಡೆದ ನೂರಾರು ಯುವಕರು ಕೂಡ ವೃಕ್ಷ ಸಂವರ್ಧನೆಗೆ ಪಣ ತೊಟ್ಟಿದ್ದಾರೆ.
ಅರಣ್ಯ ಇಲಾಖೆ ಸಾಲು ಮರದ ತಿಮ್ಮಕ್ಕ ಅವರ ಹೆಸರಲ್ಲಿ ವೃಕ್ಷೋದ್ಯಾನಗಳನ್ನು ನಿರ್ಮಿಸಿದೆ. ಸಾಕಷ್ಟು ಜನ ವಿದ್ಯಾವಂತರಾಗಿದ್ದರೂ ಪರಿಸರ ಸಂರಕ್ಷಣೆಗೆ ಯಾವುದೇ ಕೊಡುಗೆ ನೀಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ತಿಮ್ಮಕ್ಕ ಅವರು ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ. ಅವರ ವೃಕ್ಷ ಪ್ರೇಮಕ್ಕೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ರಾಷ್ಟ್ರೀಯ ಪೌರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ವೀರಚಕ್ರ ಪ್ರಶಸ್ತಿ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರದಿಂದ ಮಾನ್ಯತೆಯ ಪ್ರಮಾಣಿಪತ್ರ, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಬೆಂಗಳೂರು ಇವರಿಂದ ಶ್ಲಾಘನೆಯ ಪ್ರಮಾಣಪತ್ರ, ಕರ್ನಾಟಕ ಕಲ್ಪವಳ್ಳಿ ಪ್ರಶಸ್ತಿ, ಗಾಢ್ ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ, ಪಂಪಾಪತಿ ಪರಿಸರ ಪ್ರಶಸ್ತಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಶ್ರೀಮಾತಾ ಪ್ರಶಸ್ತಿ, ಎಚ್. ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ, ಕರ್ನಾಟಕ ಪರಿಸರ ಪ್ರಶಸ್ತಿ, ಮಹಿಳಾರತ್ನ ಪ್ರಶಸ್ತಿ, ನ್ಯಾಷನಲ್ ಸಿಟಿಜನ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ, ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿ, 2019ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಇತ್ಯಾದಿಗಳು ಅವರನ್ನರಸಿ ಬಂದವು.
ಮರಗಳನ್ನು ರಕ್ಷಿಸಿ ಬೆಳೆಸಿದ ತಿಮ್ಮಕ್ಕ ಇಂದು ವಿಶ್ವಮಾನ್ಯರಾಗಿದ್ದಾರೆ. ಬಿಬಿಸಿ ಸುದ್ದಿವಾಹಿನಿ ನಡೆಸಿದ ಜಗತ್ತಿನ 100 ಪ್ರಭಾವಿ ಮಹಿಳೆಯರ ಸಮೀಕ್ಷೆಯಲ್ಲಿ ಸಾಲು ಮರದ ತಿಮ್ಮಕ್ಕ ಸ್ಥಾನ ಪಡೆದಿದ್ದರು ಎಂಬುದೂ ಕೂಡ ಅಭಿಮಾನಪಡುವ ಸಂಗತಿಯಾಗಿದೆ. ಇಂದು ತಿಮ್ಮಕ್ಕನವರು ನಮ್ಮನ್ನು ಅಗಲಿದರೂ ಅವರ ಪರಿಸರ ಪ್ರೇಮ ಅವರನ್ನು ಚಿರಸ್ಥಾಯಿಯಾಗಿಸಿದೆ.
ಅಗಲಿದ ಮಹಾಚೇತನಕ್ಕೆ ನಮನಗಳು. ನಿಸರ್ಗ ಪ್ರೀತಿಯ ಮೂಲಕ ಇಡೀ ಜಗತ್ತಿಗೆ ಮಾದರಿಯಾಗಿದ್ದ ಅವರ ಅಸಾಮಾನ್ಯ ಬದುಕು ಮತ್ತು ಪರಿಸರಕ್ಕೆ ಅವರ ಕೊಡುಗೆ ಚಿರಸ್ಮರಣೀಯ. ದೊಡ್ಡ ಕೆಲಸಗಳನ್ನು ಮಾಡಲು ಶಿಕ್ಷಣ ಮತ್ತು ಹಣ ಅಗತ್ಯವಿಲ್ಲ ಎಂದು ಅವರು ಸಾಬೀತುಪಡಿಸಿದರು. ಅವರು ಪ್ರಕೃತಿಗಾಗಿ ನಿಸ್ವಾರ್ಥವಾಗಿ ಕೆಲಸ ಮಾಡಿದರು. ಅವರು ಮಾಡಿದ ಪರಿಸರ ಕೆಲಸಗಳು ನಮ್ಮ ರಾಜ್ಯದ ಗೌರವವನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದವು. ಅವರ ಪರಿಸರ ಕಾಳಜಿಯನ್ನು ನಾವೆಲ್ಲರೂ ಮುಂದುವರೆಸಿಕೊಂಡು ಹೋದರೆ ಅವರಿಗೆ ಗೌರವ ಸಲ್ಲಿಸಿದಂತೆ. ನಮ್ಮ ಜೀವನದ ಪ್ರತೀ ಹೆಜ್ಜೆಯಲ್ಲೂ ಪರಿಸರ ಕಾಳಜಿ, ಪರಿಸರ ಪ್ರೇಮವನ್ನು ಅಳವಡಿಸಿಕೊಳ್ಳುವ ಬದ್ಧತೆಯನ್ನು ತೋರಿಸೋಣ.

ರಾಜು. ಭೂಶೆಟ್ಟಿ.
ಹುಬ್ಬಳ್ಳಿ.



