ವಿಫಲವಾದ `ಆಪರೇಷನ್ ಚಿರತೆ’

0
Spread the love

ಅರಣ್ಯ ಇಲಾಖೆಯಿಂದ ಚಿರತೆ ಸೆರೆ ಹಿಡಿಯಲು ನಾನಾ ತಂತ್ರ |ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

Advertisement
  • ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಗಜೇಂದ್ರಗಡ ಸುತ್ತಮುತ್ತ ಇತ್ತೀಚೆಗೆ ಚಿರತೆ ದಾಳಿ ಪ್ರಕರಣಗಳು ಹೆಚ್ಚುತ್ತಿವೆ. ಈವರೆಗೂ ಹಸು, ನಾಯಿ ಇತ್ಯಾದಿ ಸಾಕುಪ್ರಾಣಿಗಳನ್ನಷ್ಟೇ ಹೊತ್ತೊಯ್ಯುತ್ತಿದ್ದ ಚಿರತೆ, ಎರಡು ದಿನಗಳ ಹಿಂದೆ ಮನುಷ್ಯರ ಮೇಲೂ ದಾಳಿ ನಡೆಸಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಗಜೇಂದ್ರಗಡ ತಾಲೂಕಿನ ಜಿಗೇರಿ ಗ್ರಾಮದ ಹೊರವಲಯದ ಬಾಳೆ ತೋಟವೊಂದರಲ್ಲಿ ಮರಿಗಳೊಂದಿಗೆ ಬೀಡುಬಿಟ್ಟಿದ್ದ ಚಿರತೆ, ತನ್ನ ಮರಿಗಳಿಗೆ ಅಪಾಯವಾಗಬಹುದು ಎಂದು ಗ್ರಹಿಸಿ, ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ದಾಳಿ ಮಾಡಿತ್ತು.


ತಕ್ಷಣ ಎಚ್ಚೆತ್ತ ಅರಣ್ಯ ಇಲಾಖೆ ಗುರುವಾರ ಬೆಳಿಗ್ಗೆಯಿಂದಲೇ `ಆಪರೇಷನ್ ಚಿರತೆ’ ಕಾರ್ಯಾಚರಣೆ ನಡೆಸಿತು. ಇಡೀ ಬಾಳೆ ತೋಟದ ಸುತ್ತ ಬೇಲಿ ಅಳವಡಿಸಿ, ಬಾಳೆಗಿಡಗಳನ್ನು ನೆಲಸಮ ಮಾಡಿ ಹುಡುಕಿದರೂ ಚಿರತೆ ಪತ್ತೆಯಾಗಿಲ್ಲ.

ಜೀಗೇರಿ ಗ್ರಾಮದಲ್ಲಿ ಶರಣಪ್ಪ ಆವಾರಿ ಅವರ ಜಮೀನಿನಲ್ಲಿ ಬೆಳಿಗ್ಗೆ ಕಾರ್ಯಾಚರಣೆಗೆ ಇಳಿದ ೫೦ಕ್ಕೂ ಅಧಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಚಿರತೆ ಶೋಧಕ್ಕೆ ಅನುಕೂಲವಾಗುವಂತೆ ಬಾಳೆತೋಟವನ್ನು ಜೆಸಿಬಿ ಮೂಲಕ ಕಡಿದು ಹಾಕಿ, ತೋಟದಲ್ಲಿ ೧ ಬೋನು ಇರಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಬೋನಿಗೆ ಕೆಡವಲು ಬೋನಿನ ಇನ್ನೊಂದು ಬದಿಯಲ್ಲಿ ನಾಯಿಯನ್ನು ಕಟ್ಟಿದ್ದರು.


ಈ ಕಾರ್ಯಾಚರಣೆಯ ಮುಂದುವರೆದ ಭಾಗವಾಗಿ, ಗ್ರಾಮಸ್ಥರ ಜೀವ ಭಯಕ್ಕೆ ಕಾರಣವಾಗಿರುವ ಚಿರತೆಯನ್ನು ಪತ್ತೆ ಹಚ್ಚಿ, ಬೋನಿಗೆ ಕೆಡವಲು ಸಕಲ ಸಿದ್ಧತೆ ಮಾಡಿಕೊಂಡ ಅರಣ್ಯ ಇಲಾಖೆ, ೫ ವಿಶೇಷ ತಂಡಗಳನ್ನು ರಚಿಸಿ ಅಂದಾಜು ೫೦ ಸಿಬ್ಬಂದಿಗಳನ್ನು ಕಾರ್ಯಾಚರಣೆಗೆ ಬಳಸಿಕೊಂಡು ಚಿರತೆಯನ್ನು ಸೆರೆ ಹಿಡಿಯಲು ಜೀಗೇರಿ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ, ತೋಟಗಳ ಮೇಲೆ ಡ್ರೋಣ್ ಕ್ಯಾಮರಾ ಮೂಲಕ ಚಿರತೆಯ ಪತ್ತೆ ಕಾರ್ಯ ನಡೆಸಿತಾದರೂ, ಈ ಕಾರ್ಯಾಚರಣೆಯೂ ಫಲ ಕೊಡಲಿಲ್ಲ.

ಜಿಲ್ಲಾ ವಲಯ ಅರಣ್ಯಧಿಕಾರಿ ಮಂಜುನಾಥ ಮೇಗಲಮನಿ, ಮುಂಡರಗಿ ಆರ್‌ಎಫ್‌ಒ ವೀರೇಂದ್ರ ಮರಿಬಸಣ್ಣವರ, ರೋಣ ಆರ್‌ಎಫ್‌ಒ ಅನ್ವರ ಕೋಲ್ಹಾರ ಹಾಗೂ ಗಜೇಂದ್ರಗಡ ಆರ್‌ಎಫ್‌ಒ ಪ್ರವೀಣಕುಮಾರ ಸಾಸವಿಹಳ್ಳಿ ಸೇರಿ ಬಿಂಕದಕಟ್ಟಿ, ಅರವಳಿಕೆ ತಜ್ಞರಾದ ನಿಖಿಲ್ ಕುಲಕರ್ಣಿ ಮತ್ತು ಜಟ್ಟಣ್ಣವರ ತಂಡದಲ್ಲಿದ್ದರು.

ಕಾರ್ಯಾಚರಣೆಯ ವೇಳೆ ಸುತ್ತ ನೆರೆದಿದ್ದ ಗ್ರಾಮಸ್ಥರಷ್ಟೇ ಅಲ್ಲದೆ, ಅರಣ್ಯ ಇಲಾಖೆಯ ಸಿಬ್ಬಂದಿಗಳಲ್ಲಿಯೂ ಆತಂಕ, ಭಯ ಮನೆಮಾಡಿತ್ತು. ಯಾವ ಕ್ಷಣದಲ್ಲಿ ಚಿರತೆ ಹೊರನೆಗೆದು ದಾಳಿ ಮಾಡುತ್ತದೋ ಎಂಬ ದಿಗಿಲು ಎಲ್ಲರ ಮೊಗದಲ್ಲಿತ್ತು. ಬಾಳೆ ತೋಟವನ್ನು ಸಂಪೂರ್ಣ ನೆಲಸಮ ಮಾಡಿ ಇಂಚಿಂಚೂ ಬಿಡದೇ ಶೋಧ ಕಾರ್ಯ ನಡೆಸಿದರೂ ಚಿರತೆ ಪತ್ತೆಯಾಗಲಿಲ್ಲ.

ಕಳೆದ 2-3 ದಿನಗಳಿಂದ ಚಿರತೆ ಹಸಿವಿನಿಂದ ಇರುವ ಸಾಧ್ಯತೆಯಿದ್ದು, ಮತ್ತೆ ದಾಳಿ ಮಾಡಿದ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಒಂದು ಬೋನು ಇಡಲಾಗಿದೆ. ಚಿರತೆಯನ್ನು ಬೋನಿಗೆ ಕೆಡವಲು ಅರಣ್ಯ ಇಲಾಖೆ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.

-ಮಂಜುನಾಥ್ ಮೇಗಲಮನಿ, ಜಿಲ್ಲಾ ವಲಯ ಅರಣ್ಯಾಧಿಕಾರಿ.


18 ವರ್ಷದ ಉದಯಕುಮಾರ್ ನಿಡಶೇಸಿ ಬಾಳೆತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ದಾಳಿ ನಡೆಸಸಿದ್ದ ಚಿರತೆ ಕುತ್ತಿಗೆ, ಎದೆ, ಬೆನ್ನಿನ ಭಾಗಕ್ಕೆ ಗಂಭೀರವಾಗಿ ಗಾಯಗೊಳಿಸಿತ್ತು. ಆತ ಜೊರಾಗಿ ಕಿರುಚಿದಾಗ, ಅಲ್ಲಿಯೇ ಸಮೀಪದಲ್ಲಿದ್ದ ಮಂಜುನಾಥ ಎನ್ನುವ ಕಾರ್ಮಿಕ ಕಲ್ಲಿನಿಂದ ಚಿರತೆಗೆ ಹೊಡೆದಿದ್ದಾನೆ. ಆಗ ಚಿರತೆ ಸ್ಥಳದಿಂದ ಕಾಲ್ಕಿತ್ತಿತ್ತು. ಚಿರತೆ ದಾಳಿ ಗಜೇಂದ್ರಗಡ ಭಾಗದ ಹತ್ತಾರು ಗ್ರಾಮಗಳಲ್ಲಿ ಆತಂಕ ಹೆಚ್ಚಿಸಿತ್ತು. ಸಾಕಷ್ಟು ಬಾರಿ ದೂರು ನೀಡಿದ್ದರೂ ಸುಮ್ಮನಿದ್ದ ಅರಣ್ಯ ಇಲಾಖೆ ಈಗ ಎಚ್ಚೆತ್ತು ಕಾರ್ಯಾಚರಣೆಗಿಳಿಯಿತಾದರೂ ಫಲಕಾರಿಯಾಗಲಿಲ್ಲ.


Spread the love

LEAVE A REPLY

Please enter your comment!
Please enter your name here