ಬೆಳಗಾವಿ: ಇದು ಗೂಗಲ್ ಮ್ಯಾಪ್ ಅನ್ನು ಅತಿಯಾಗಿ ನಂಬಿ ವಾಹನ ಚಾಲನೆ ಮಾಡುವವರಿಗೆ ನಿಜಕ್ಕೂ ಎಚ್ಚರಿಕೆಯ ಗಂಟೆ. ಹೌದು ಬಿಹಾರ ಮೂಲದ ಕುಟುಂಬವೊಂದು ಆಂಧ್ರ ಪ್ರದೇಶದಿಂದ ಗೋವಾಕ್ಕೆ ತೆರಳುತ್ತಿದ್ದ ಕಾರಿನಲ್ಲಿದ್ದವರು ಗೂಗಲ್ ಮ್ಯಾಪ್ ಹಾಕಿಕೊಂಡಿದ್ದರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾಡಿಗುಂಜಿ ಬಳಿ ಕಾಡಿನಲ್ಲಿ ಕಾರಿನಲ್ಲಿದ್ದವರಿಗೆ ದಾರಿ ತಪ್ಪಿದೆ.
ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ದಾರಿ ತಪ್ಪಿ ಫಜೀತಿಯಾಗಿದೆ. ಮಧ್ಯರಾತ್ರಿ ದಾರಿ ತಪ್ಪಿದ ಪ್ರಯಾಣಿಕರು, ಹತ್ತು ಕಿಲೋಮೀಟರ್ ಕಾಡಿನಲ್ಲಿ ಪ್ರಯಾಣಿಸಿದ್ದರು. ಅಷ್ಟರಲ್ಲಿ, ರಸ್ತೆ ಮುಗಿದು ಹಳ್ಳ ಕಾಣಿಸಿದೆ. ಆಗ ಪ್ರಯಾಣಿಕರಿಗೆ ದಾರಿ ತಪ್ಪಿದ್ದು ಗೊತ್ತಾಗಿದೆ. ದಾರಿ ತಪ್ಪಿದ ಪ್ರಯಾಣಿಕರಿಗೆ ಅಲ್ಲಿಂದ ಎತ್ತ ಕಡೆ ತೆರಳಬೇಕು ಎಂಬುದೂ ಗೊತ್ತಾಗಿಲ್ಲ.
ಅರಣ್ಯ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಸಿಗದೇ ಕುಟುಂಬ ಪರದಾಡಿದೆ. ಕಾರಿನಲ್ಲೇ ಇಡೀ ರಾತ್ರಿ ಭಯದಲ್ಲೇ ಕಳೆದಿದೆ. ನಂತರ ಕಾರಿನ ಚಾಲಕ ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸ್ ಸಿಬ್ಬಂದಿ, ನಾಲ್ವರನ್ನೂ ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬಂದಿದ್ದಾರೆ. ಮುಖ್ಯ ರಸ್ತೆಗೆ ಕರೆದುಕೊಂಡು ಗೋವಾ ದಾರಿ ತೋರಿಸಿದ್ದಾರೆ.