HomeGadag Newsಉಭಯ ಗುರುಗಳ ಜಾತ್ರಾ ಮಹೋತ್ಸವ

ಉಭಯ ಗುರುಗಳ ಜಾತ್ರಾ ಮಹೋತ್ಸವ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪರಮಪೂಜ್ಯ ಗಾನಯೋಗಿ ಶಿವಯೋಗಿ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ, ಪದ್ಮಭೂಷಣ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಮತ್ತು ಉಭಯ ಗುರುಗಳ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜೂನ್ 12ರಿಂದ ಆರಂಭವಾಗಲಿದ್ದು, ಕೀರ್ತನ, ಸಂಗೀತ, ಉಪನ್ಯಾಸ, ನಾಟಕ, ಅಂಧರಗೋಷ್ಠಿ, ಗ್ರಂಥ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿವೆ ಎಂದು ಡಾ. ಕಲ್ಲಯ್ಯಜ್ಜನವರು ಮಾಹಿತಿ ನೀಡಿದರು.

ನಗರದ ಪಂಚಾಕ್ಷರಿ ಗವಾಯಿ ಮಠದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಶ್ರೀಗಳು ಮಾತನಾಡಿದರು.

ಜೂನ್ 12ರಿಂದ 16ರವರೆಗೆ ಸಿದ್ಧಾರೂಢ ಮಠದ ಶ್ರೀ ಕೃಷ್ಣೇಗೌಡರು ಹಾಗೂ ವೇದಮೂರ್ತಿ ಕುಮಾರಸ್ವಾಮಿ ಹಿರೇಮಠ ಅವರಿಂದ ಕರ್ತೃ ಗದ್ದುಗೆಗೆ ಪ್ರತಿದಿನ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ನಡೆಯಲಿದೆ. ಜೂನ್ 12ರಂದು ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನ ನಡೆಯಲಿದ್ದು, ಗುರು ಮಹಾಂತಯ್ಯ ಶಾಸ್ತ್ರಿ ರಚಿಸಿರುವ `ಗೀತ ಮಂದಾರ’ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಶ್ರೀ ವೀರೇಶ್ವರ ಪುಣ್ಯಶ್ರಮದ ವಿದ್ಯಾರ್ಥಿಗಳಿಂದ `ಸೊನ್ನಲಗಿ ಶ್ರೀ ಸಿದ್ದರಾಮೇಶ್ವರ’ ನಾಟಕ ಜರುಗಲಿದೆ ಎಂದು ತಿಳಿಸಿದರು.

ಜೂನ್ 13ರಂದು ಶಿರಹಟ್ಟಿ ಮಹಾಸಂಸ್ಥಾನ ಪೀಠದ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕೀರ್ತನ ಸಮ್ಮೇಳನ ಹಾಗೂ ಅಂಧರಗೋಷ್ಠಿ, ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10.30ಕ್ಕೆ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದಿಂದ `ಬಂದರ ನೋಡ ಬಂಗಾರಿ’ ನಾಟಕ ಪ್ರದರ್ಶನಗೊಳ್ಳಲಿದೆ. ಸಾನ್ನಿಧ್ಯವನ್ನು ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮೀಜಿಗಳು ಹಾಗೂ ಅಧ್ಯಕ್ಷತೆಯನ್ನು ಡಾ. ಕಲ್ಲಯ್ಯಜ್ಜನವರು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಜೂನ್ 16ರಂದು ಧರ್ಮೋತ್ತೇಜಕ ಮಹಾಸಭೆ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಜಿಗಳು ವಹಿಸಿಕೊಳ್ಳಲಿದ್ದಾರೆ. ಗಂಗಾವತಿಯ ಕಲ್ಮಠದ ಡಾ. ಕೊಟ್ಟೂರು ಮಹಾಸ್ವಾಮಿಗಳು ನೇತೃತ್ವವನ್ನು ವಹಿಸಿಕೊಳ್ಳಲಿದ್ದಾರೆ. ಜೂನ್ 17ರಂದು ರಾತ್ರಿ 10:30ಕ್ಕೆ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘದಿಂದ `ಗಡಗಿ ಜ್ವಾಕಿ ತಂಗಿ’ ಎನ್ನುವ ಸಾಮಾಜಿಕ ನಾಟಕ ನಡೆಯಲಿದೆ. ಸ್ತ್ರೀ ಪಾತ್ರದಲ್ಲಿ ನಟನೆಯ ಮೂಲಕ ಹೆಸರುವಾಸಿಯಾಗಿರುವ ಮಹಾದೇವ ಗುಡ್ಲಿ ಹೊಸೂರು ಇವರು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ. ಶ್ರೀ ವೀರಭದ್ರೇಶ್ವರ ಡ್ರಾಮಾ ಸೀನ್ಸ್ ಇವರು ರಂಗ ಸಜ್ಜಿಕೆಯ ಸೇವೆ ಮಾಡಿದ್ದಾರೆ. ನಂತರ ಪೂಜ್ಯರ ಮಂಗಳ ಗೀತೆಯೊಂದಿಗೆ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮಗಳು ಸಂಪನ್ನಗೊಳಲಿವೆ ಎಂದು ಕಲ್ಲಯ್ಯಜ್ಜನವರು ತಿಳಿಸಿದರು.

ಈ ವೇಳೆ ನಿಂಗಪ್ಪ ಎಸ್.ಕೆಂಗಾರ, ಪ್ರಕಾಶ ಚ.ಬಸರಿಗಿಡದ, ವಸಂತಗೌಡ್ರ ಬಿ.ಪೊಲೀಸ್‌ಪಾಟೀಲ, ಚನ್ನವೀರಸ್ವಾಮಿ ಜ.ಬಾಳಿಹಳ್ಳಿಮಠ, ಪರಶುರಾಮ ಎಫ್.ಕಟ್ಟಿಮನಿ, ಪ್ರಭುಲಿಂಗಯ್ಯ ಸಿ.ಹಿರೇಮಠ, ಚನ್ನಬಸಯ್ಯ ಪಿ.ಬಂಕಾಪೂರಮಠ, ಮುರುಘಯ್ಯ ಆರ್.ಹಿರೇಮಠ, ಶಿವರುದ್ರಪ್ಪ ಆರ್.ಇಟಗಿ, ಸಂಗಮೇಶ ಟಿ.ದುಂದೂರ ಮುಂತಾದವರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ

2025ನೇ ಸಾಲಿನ ಪಂ. ಪಂಚಾಕ್ಷರ ಗವಾಯಿಗಳವರ ಪುಣ್ಯಸ್ಮರಣೋತ್ಸವದಲ್ಲಿ `ಕುಮಾರಶ್ರೀ ಪ್ರಶಸ್ತಿ’ಯನ್ನು ವೇ. ವಿರೂಪಾಕ್ಷಯ್ಯ ಶಾಸ್ತ್ರೀ ಹಿರೇಮಠ (ಪ್ರವಚನ ಕ್ಷೇತ್ರ), ರಾಜು ಎಮ್ಮಿಗನೂರ, (ಗಾಯನ ಕ್ಷೇತ್ರ), ಪ್ರಕಾಶ ಚನ್ನಪ್ಪ ಬಸರಿಗಿಡದ-ಗದಗ (ಭೂದಾನ ಕ್ಷೇತ್ರ) ಮತ್ತು `ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿ’ಯನ್ನು ಶ್ರೀ ರಾಮಣ್ಣ ನಸಬಿ (ಸಂಗೀತ ಕ್ಷೇತ್ರ) ಇವರಿಗೆ ನೀಡಲಾಗುವುದು.

ಜೂನ್ 14ರಂದು ಮುಂಡರಗಿ ಸಂಸ್ಥಾನ ಮಠದ ಶ್ರೀ ಅನ್ನದಾನೀಶ್ವರ ಶಿವಯೋಗಿಗಳವರ ಸಾನ್ನಿಧ್ಯದಲ್ಲಿ ಕೀರ್ತನ ಸಮ್ಮೇಳನ ನಡೆಯಲಿದೆ. ಇದೇ ದಿನ ಉಚಿತ ಆರೋಗ್ಯ ತಪಾಸಣಾ ಶಿಬಿರ, ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಕೂಡ ನಡೆಯಲಿದೆ. ಜೂನ್ 15ರಂದು ಶಿವಾನುಭವಗೋಷ್ಠಿ, ಸಂಗೀತ ಸಭೆಯನ್ನು ಆಯೋಜಿಸಲಾಗಿದೆ. ಸಂಗೀತ ಸಭೆಯಲ್ಲಿ ವೀರೇಶ ಕಿತ್ತೂರು, ವೀರಭದ್ರಯ್ಯ ಯರಗಲ್ ಮೈಸೂರು, ಹನುಮಂತಪ್ಪ ಗೋನವಾರ, ಸದಾಶಿವ ಪಾಟೀಲ ಕೊಪ್ಪಳ ಸೇರಿದಂತೆ ವಿವಿಧ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಡಾ. ಕಲ್ಲಯ್ಯಜ್ಜನವರು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!