ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸಮೀಪದ ಹರಿಪೂರ ಗ್ರಾಮದಲ್ಲಿ ಶ್ರಾವಣ ಮಾಸದ 2ನೇ ಮಂಗಳವಾರ ಶ್ರೀ ಶಂಕರಲಿಂಗೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಶ್ರೀ ವೀರಭದ್ರೇಶ್ವರ ದೇವರ 37ನೇ ವರ್ಷದ ಅಗ್ನಿಮಹೋತ್ಸವವು ಸಡಗರ-ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ 6 ಗಂಟೆಗೆ ಶ್ರೀ ಶಂಕರಲಿಂಗೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವರಿಗೆ ಮಹಾರುದ್ರಾಭಿಷೇಕ ನೆರವೇರಿತು. 8 ಗಂಟೆಗೆ ಶ್ರೀ ವೀರಭದ್ರ ದೇವರ ಪಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಪುರವಂತರು ವೀರಭದ್ರ ದೇವರ ವಚನಗಳನ್ನು ಹೇಳುತ್ತಾ, ಗಲ್ಲ, ತುಟಿ, ಹೊಟ್ಟೆ, ಗಂಟಲು, ನಾಲಿಗೆಗೆ ಶಸ್ತ್ರಗಳನ್ನು ಧರಿಸಿ ತಮ್ಮ ಭಕ್ತಿಯನ್ನು ಮೆರೆದರು.
ನಂದಿಧ್ವಜ, ಸಮ್ಮಾಳ ಮತ್ತು ಸಕಲ ವಾದ್ಯಗೋಷ್ಠಿಗಳಿಂದ ಭವ್ಯ ಮೆರವಣಿಗೆಯು ನಡೆದು ಮಧ್ಯಾಹ್ನ 2ರ ಸುಮಾರಿಗೆ ದೇವಸ್ಥಾನದ ಆವರಣದಲ್ಲಿಯ ಅಗ್ನಿಕುಂಡದಲ್ಲಿ ಭಕ್ತರು ಅಗ್ನಿಯನ್ನು ಹಾಯ್ದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ನಂತರ ಅನ್ನಸಂತರ್ಪಣೆ ಜರುಗಿತು. ಈ ಸಂದರ್ಭದಲ್ಲಿ ಶಂಕ್ರಪ್ಪ ಕಾಳಗಿ, ಶ್ರೀಶೈಲ ಮಣ್ಣೂರ, ವೀರೇಶ ದೇಸಾಯಿಪಟ್ಟಿ ಚಂದ್ರು ಕಾಳಗಿ, ಸಿ.ಪಿ. ಕಾಳಗಿ, ಶಂಭು ಕಾಳಗಿ, ಬಸವರಾಜ ದೇಸಾಯಿಪಟ್ಟಿ, ವಿಜಯಕುಮಾರ ದೇಸಾಯಿಪಟ್ಟಿ, ಬಸವರಾಜ ಮೂರಶಿಳ್ಳಿ, ಪ್ರಸನ್ನ ಮೂರಶಿಳ್ಳಿ, ಪ್ರಶಾಂತ ಕಾಳಗಿ, ಎಂ.ಪಿ. ಕಲ್ಮಠ ಮುಂತಾದವರು ಉಪಸ್ಥಿತರಿದ್ದರು.