ವಿಜಯಸಾಕ್ಷಿ ಸುದ್ದಿ, ಗದಗ: ಎಷ್ಟೊಂದು ಮನಸುಗಳಿಗೆ ಈ ಚಲನಚಿತ್ರ ಸ್ಫೂರ್ತಿಯಾಗಲಿದ್ದು, ಬಹಳಷ್ಟು ಜನರ ಹೃದಯ ತಲುಪಬೇಕು ಎಂಬುದು ನಮ್ಮೆಲ್ಲರ ಪ್ರಯತ್ನ. ಒಳ್ಳೆಯ ಚಿತ್ರವನ್ನು ಪ್ರೇಕ್ಷಕರಿಗೆ ಒದಗಿಸಬೇಕೆಂಬ ಸಂಕಲ್ಪ ಹೊಂದಿದ್ದೇವೆ. ಕ್ಷೇತ್ರಪತಿ, ರ‍್ಯಾಂಬೋ, ಸಲಾರ್ ನಂತರ ಈಗ `ನೋಡಿದವರು ಏನಂತಾರೆ’ ಎಂಬ ಚಿತ್ರ ತೆರೆಗೆ ಬರಲಿದ್ದು, ಚಿತ್ರದಲ್ಲಿ ಸಿದ್ಧಾರ್ಥ ಎಂಬ ಹೆಸರಿನಿಂದ ಪಾತ್ರ ಮಾಡುತ್ತಿರುವುದಾಗಿ ನಟ ನವೀನ್ ಶಂಕರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಗುರುತಿಸಿ ನಟನೆಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ನೋಡಿದವರು ಏನಂತಾರೆ ಚಿತ್ರದ ಬಿಡುಗಡೆಗೆ ಸಿದ್ಧವಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ತೆರೆಗೆ ಬರಲಿದೆ. ಜನರನ್ನು ನಮ್ಮ ನಟನೆ ಮೊದಲು ತಲುಪಬೇಕು. ನಂತರ ವ್ಯಕ್ತಿ ತಲುಪಬೇಕೆಂದು ನಟ ನವೀನ್ ಶಂಕರ ಹೇಳಿದರು.
ನಿರ್ಮಾಪಕ ಕುಲದೀಪ ಕಾರ್ಯಪ್ಪ ಮಾತನಾಡಿ, ಕನ್ನಡ ಚಲನಚಿತ್ರಗಳು ಪ್ರದರ್ಶನಗೊಳ್ಳುವುದು ಕಷ್ಟವೆಂದುಕೊಂಡ ಸಂದರ್ಭದಲ್ಲಿ ಚಿತ್ರದ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಪ್ರೇಕ್ಷಕರಿಗೆ ಇನ್ನೂ ಒಳ್ಳೆಯ ಚಿತ್ರಗಳನ್ನು ನೀಡಬೇಕೆಂದು ಅಂದುಕೊಂಡಿದ್ದೇವೆಂದು ಹೇಳಿದರು.
ಈ ಸಂದರ್ಭದಲ್ಲಿ ನಿರ್ಮಾಪಕರಾದ ನಾಗೇಶ, ನಿಂಗಪ್ಪ ಹುಣಸಿಮರದ ವಿಜಯ ಕಿರೆಸೂರ, ಕೃಷ್ಣ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.