ತಮಿಳು ಚಿತ್ರರಂಗದ ನಟ ಧನುಶ್ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಈ ಬಾರಿ ಅವರ ವಿರುದ್ಧ ‘ಥೆಂಡಾಲ್ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ 20 ಕೋಟಿ ರೂಪಾಯಿ ಪರಿಹಾರ ಕೋರಿ ಕಾನೂನು ನೋಟಿಸ್ ಕಳುಹಿಸಿದೆ.
2016ರಲ್ಲಿ ‘ನಾನ್ ರುದ್ರನ್’ ಚಿತ್ರಕ್ಕೆ ಧನುಶ್ ಸಹಿ ಹಾಕಿದ್ದರು. ನಟನೆಯ ಜೊತೆಗೆ ನಿರ್ದೇಶನ ಮಾಡುವುದಕ್ಕೂ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಆದರೆ ವರ್ಷಗಳಾದರೂ ಚಿತ್ರ ಸೆಟ್ಟೇರದೆ ಉಳಿದಿದೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.
ಕಥೆಯಲ್ಲಿ ಮಾಡಿದ ಬದಲಾವಣೆಗಳಿಗೆ ಒಪ್ಪಿಗೆ ನೀಡಿದ ನಂತರವೂ ಸಂಪೂರ್ಣ ಚಿತ್ರಕಥೆ ಒದಗಿಸಲಿಲ್ಲ. ಇದರಿಂದಾಗಿ ಯೋಜನೆ ವಿಳಂಬವಾಗಿ ನಿರ್ಮಾಪಕರಿಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಹೂಡಿಕೆ ಮೊತ್ತವನ್ನು ವಾಪಸ್ ಪಡೆಯಲು 20 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ನಿರ್ಮಾಪಕರು ಆಗ್ರಹಿಸಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಲಾಗಿದೆ.
ಈ ಬೆಳವಣಿಗೆಯ ನಡುವೆ ಧನುಶ್ ತಮ್ಮ ಮುಂದಿನ ಚಿತ್ರ ‘D55’ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ‘ಅಮರನ್’ ಚಿತ್ರದ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಪ್ರಕರಣದ ಕುರಿತು ಧನುಶ್ ಪ್ರತಿಕ್ರಿಯೆ ನೀಡಬೇಕಿದೆ.



