ಮೋಡಿ ಮಾಡುವ ವಾಕ್ಚಾತುರ್ಯ, ಸದಾ ನಗುಮೊಗದ ಹಾಸ್ಯಗಾರ್ತಿ, ವರ್ಗ ಕೋಣೆಯಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕಿ, ಪ್ರವೃತ್ತಿಯಿಂದ ಸದಾ ಕ್ರಿಯಾಶೀಲ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಸೃಜನಶೀಲೆ, ಹವ್ಯಾಸಿ ರಂಗನಟಿಯಾಗಿ ಎಲ್ಲರದೆಯಲ್ಲಿ ನೆನಪುಗಳ ಭಾವ ಬಿತ್ತಿದ ನಾಯಕಿ, ಬಹುಮುಖ ವ್ಯಕ್ತಿತ್ವದ ನನ್ನ ನೆಚ್ಚಿನ ಗುರುಮಾತೆ ಕವಿತಾ ಕಾಶಪ್ಪನವರ.
ವಿದ್ಯೆ ಕಲಿಸಿದ ಗುರು ಎಂದೆಂದಿಗೂ ಭಗವಂತನ ಸಮಾನ. ಗುರುವಿಗೆ ಹುಟ್ಟು-ಸಾವು ಎಂಬುದೇ ಇಲ್ಲ. ಆದರೂ ಭೌತಿಕ ಪ್ರಪಂಚದ ವಿದಾಯ ಎಲ್ಲರಿಗೂ ಅನಿವಾರ್ಯ. ಆದರೆ ಬದುಕಿದಷ್ಟು ದಿನಗಳು, ಕ್ಷಣಗಳನ್ನು ಅಷ್ಟೇ ಸಂತೋಷಮಯವಾಗಿ, ಲವಲವಿಕೆಯಿಂದ, ಅರ್ಥಪೂರ್ಣ ಬದುಕನ್ನು ನಿರ್ವಹಿಸಿದವರು ವಿರಳ. ಇಂತಹ ವಿರಳ ವ್ಯಕ್ತಿತ್ವದವರಲ್ಲಿ ಕವಿತಾ ಕಾಶಪ್ಪನವರ ಸಹ ಒಬ್ಬರು. ಇವರಲ್ಲಿದ್ದ ಜೀವನೋತ್ಸಾಹ ಎಲ್ಲರಿಗೂ ಮಾದರಿ. ಇಂತಹ ಅಪರೂಪದ ಕಾವ್ಯಮಯ ಬದುಕಿನ ಒಡತಿ ಕವಿತಾ ಅವರ ಶಿಷ್ಯೆಯಾಗಿ ಕಲಿಯುವ ಅವಕಾಶ ನನಗೊದಗಿದ್ದು ನನ್ನ ಸುದೈವ.
ವಿಷಯ ಬೋಧನೆಯಲ್ಲಿ ತಿಳಿಹಾಸ್ಯ ಚಟಾಕಿ ಇವರ ವೈಶಿಷ್ಟ್ಯ. ಜೊತೆಗೆ ಬದುಕಿನ ಮೌಲ್ಯಯುತ ಪಾಠಗಳನ್ನು, ವಾಸ್ತವ ಚಿತ್ರಣವನ್ನು ಕಣ್ಮುಂದೆ ಕಟ್ಟುವಂತೆ ಮನೋಜ್ಞವಾಗಿ ಹೇಳುತ್ತಿದ್ದ ಇವರ ಬೋಧನಾಶೈಲಿ ಎಲ್ಲರ ಮನಸ್ಸಿಗೆ ಹಿಡಿಸುವಂತಿತ್ತು. ವಿಷಯವನ್ನು ಸರಳೀಕರಿಸಿ ಹೇಳುವ ತಂತ್ರಗಾರಿಕೆ ಇವರಲ್ಲಿತ್ತು. ವಿದ್ಯಾರ್ಥಿಗಳ ಮುಖದಲ್ಲಿ ನಗುವನ್ನು ಮೂಡಿಸುವ ಕೌಶಲ ಇವರಲ್ಲಿ ಕರಗತವಾಗಿತ್ತು. ಅಷ್ಟೇ ಗಂಭೀರ ವದನೆಯಾಗಿ ಕೆಲವು ಸಂದರ್ಭಗಳನ್ನು ನಿಭಾಯಿಸುವ ಚಾಕಚಕ್ಯತೆ ಇವರಲ್ಲಿತ್ತು.
ಸುಮಾರು 23 ವರ್ಷಗಳ ಹಿಂದೆ ಪಿಯುಸಿ ಓದುವಾಗ ಇವರನ್ನು ಮೊಟ್ಟಮೊದಲಿಗೆ ನೋಡಿದಾಗ ಅದೇನೋ ಒಂದು ಜೀವನದ ಉತ್ಸಾಹ ನನ್ನಲ್ಲೂ ಚಿಗುರೊಡೆಯಿತು. ವಿದ್ಯಾರ್ಥಿನಿಯರಿಗಂತೂ ಇವರು ಆಗಾಗ ಹೇಳುತ್ತಿದ್ದ ಕಿವಿಮಾತುಗಳು, ಎಚ್ಚರಿಕೆಯ ವಾಸ್ತವ ವಿಚಾರಗಳು ಅದೆಷ್ಟೋ ವಿದ್ಯಾರ್ಥಿನಿಯರ ಪಾಲಿಗೆ ಆಶಾ ಕಿರಣವಾಗಿತ್ತು. ನೋಡಮ್ಮ, ಎಲ್ಲಾ ಹೆಣ್ಣು ಮಕ್ಕಳು ನೀವು ಜೀವನದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಕೌಟುಂಬಿಕವಾಗಿ ಸಬಲರಾಗಬೇಕಾದರೆ, ನಿಮ್ಮ ಬದುಕಿಗೊಂದು ಅರ್ಥ ಬರಬೇಕಾದರೆ ನಿಮ್ಮ ಕಾಲ ಮೇಲೆ ನೀವು ನಿಲ್ಲುವವರೆಗೂ ವಿದ್ಯಾಭ್ಯಾಸ ಮುಂದುವರಿಸಬೇಕು. ನಮ್ಮ ಜೀವನದ ಖರ್ಚು-ವೆಚ್ಚಗಳನ್ನು ನಾವೇ ನಿಭಾಯಿಸಬೇಕು. ಹತ್ತು ರೂಪಾಯಿ ಕೊಡು, ನೂರು ರೂಪಾಯಿ ಕೊಡು ಎಂದು ಗಂಡು ಮಕ್ಕಳ ಮುಂದೆ ಕೈಚಾಚುವ ಸಂದರ್ಭ ಬರಬಾರದು ಎನ್ನುತ್ತಿದ್ದ ಅವರ ಮಾತುಗಳು ಮಹಿಳಾ ಆರ್ಥಿಕ ಸಬಲತೆಗೆ ಹಿಡಿದ ಕೈಗನ್ನಡಿಯಂತಿವೆ.
ಅಂದು ಗದಗ ನಗರದಲ್ಲಿ ದಂಡಿನರವರ ಕೆವಿಎಸ್ಆರ್ ಹಾಗೂ ಕೆಎಸ್ಎಸ್ ಕಾಲೇಜ್ ಎಂದರೆ ಅದೊಂದು ಬ್ರಾಂಡ್ ಕ್ರಿಯೇಟ್ ಮಾಡಿದ ಸಂಸ್ಥೆ. ಪಾಂಡಿತ್ಯದ ಮಹಾಪೂರವೇ ಆ ಸಂಸ್ಥೆಯಲ್ಲಿತ್ತು. ಹಾಗಾಗಿ ನಗರ ಪ್ರದೇಶದ ಸುತ್ತಲಿನ ಗ್ರಾಮೀಣ ಭಾಗದಿಂದ ವಿದ್ಯಾರ್ಥಿಗಳ ಸಮೂಹವೇ ದಂಡಿನ ಸಂಸ್ಥೆಯ ಕ್ಯಾಂಪಸ್ನಲ್ಲಿರುತ್ತಿತ್ತು. ಆ ಇಮೇಜ್ ಗೆ ಕಾರಣವೇ ಆ ಸಂಸ್ಥೆಯಲ್ಲಿ ಬೋಧಿಸುತ್ತಿದ್ದ ಅಪರೂಪ ವ್ಯಕ್ತಿತ್ವವುಳ್ಳ ಉಪನ್ಯಾಸಕ ವರ್ಗ. ಒಬ್ಬರಿಗಿಂತ ಮತ್ತೊಬ್ಬರು ವಿಶೇಷವೇ. ಅವರಲ್ಲಿದ್ದ ಜ್ಞಾನ ಪಾಂಡಿತ್ಯ, ವಿದ್ಯಾರ್ಥಿಗಳ ಏಳಿಗೆಗೆ ಅವರು ಶ್ರಮಿಸುತ್ತಿದ್ದ ರೀತಿ ಎಲ್ಲವೂ ಇಂದಿಗೂ ಮಾದರಿ.
ಅಂತಹ ಪವಿತ್ರವಾದ ವೃತ್ತಿಯಲ್ಲಿ ತಮ್ಮನ್ನು ತಾವು ಕ್ರಿಯಾಶೀಲವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಪಾಲಿಗೆ ತಿದ್ದಿ ಬುದ್ಧಿ ಹೇಳುವ ತಾಯಿಯಾಗಿ ಕವಿತಾ ಅವರು ನೀಡಿದ ಮೌಲ್ಯಯುತ ವಿಚಾರಗಳನ್ನು ಮರೆಯುವಂತಿಲ್ಲ. ಅವರೊಬ್ಬ ಮಹಿಳಾ ನಾಯಕಿ. ಹಾಗೆಯೇ ಬದುಕಿದವರು ಕೂಡ. ನಾನು ಕೂಡ ಗದಗ ಪರಿಸರದಲ್ಲಿಯೇ ಹುಟ್ಟಿ ಬೆಳೆದು ವೃತ್ತಿ ಪ್ರವೃತ್ತಿಯಿಂದ ಇಲ್ಲಿಯೇ ನೆಲೆ ಕಂಡುಕೊಂಡಾಗ ತಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿನಿಯ ಮುನ್ನಡೆಯನ್ನು ಕಂಡು ಮನಸ್ಸಿನಲ್ಲಿ ಹಿರಿಹಿರಿ ಹಿಗ್ಗಿದವರು. ಜೊತೆಗೆ ಮನಸಾರೆ ಹಾರೈಸಿದವರು.
ಇತ್ತೀಚಿಗಂತೂ ನೆನಪಾದಗೊಮ್ಮೆ ಫೋನ್ ಕರೆ ಮಾಡಿ ತಮ್ಮ ವೃತ್ತಿ ಬದುಕಿನ ಕೆಲವು ಸಂದರ್ಭಗಳನ್ನು ಹಾಗೂ ಇತ್ತೀಚಿನ ಬದಲಾವಣೆಗಳನ್ನು ಹಂಚಿಕೊಳ್ಳುತ್ತಿದ್ದರು. ನಿವೃತ್ತಿಯ ನಂತರ ತಮ್ಮ ಕುಟುಂಬದ ಜೊತೆಗೆ ಕಳೆಯುವ ಕ್ಷಣಗಳನ್ನು, ಮಕ್ಕಳು, ಮೊಮ್ಮಕ್ಕಳನ್ನು ನೆನೆದು ಸಂತಸ ಪಡುತ್ತಿದ್ದರು. ಅವರ ವಿದ್ಯಾರ್ಥಿನಿಯಾಗಿ ಅವರಲ್ಲಿದ್ದ ಸಕಾರಾತ್ಮಕ ವಿಚಾರಗಳನ್ನು ಒಡನಾಟವನ್ನು ಅಷ್ಟೇ ನಾನು ದಾಖಲಿಸಬಲ್ಲೆ. ನಾನು ಕೂಡ ಶಿಕ್ಷಣ ಶಾಸ್ತ್ರದ ಉಪನ್ಯಾಸಕಿಯಾಗಿ ವೃತ್ತಿ ನಿರ್ವಹಿಸುವಾಗ ತುಂಬಾ ಸಂತಸಪಟ್ಟರು. ನನ್ನ ಹಲವು ಸಮಾಜಮುಖಿ ಸಂಘಟನಾತ್ಮಕ ಕಾರ್ಯಗಳನ್ನು ಕಂಡು ಅಭಿನಂದಿಸಿದರು ಕೂಡ.
ಇಷ್ಟು ಬೇಗ ನಮ್ಮನ್ನು ಅಗಲುವ ವಯಸ್ಸು ಸಹ ಅವರದಲ್ಲ. ಕೇವಲ 65ರ ವಯಸ್ಸಿನಲ್ಲಿ ನಾವ್ಯಾರು ಕೂಡ ನಿರೀಕ್ಷಿಸದ ರೀತಿಯಲ್ಲಿ ನಮ್ಮನ್ನಗಲಿದ್ದಾರೆ. ಅವರಿನ್ನು ನಮ್ಮ ಜೊತೆಗಿದ್ದಾರೆ ಎನ್ನುವ ಭಾವದಲ್ಲಿಯೇ ನಾವಿದ್ದೇವೆ. ಅವರ ಹಾಸ್ಯ, ಅವರ ಮಾತುಗಳು, ಅವರ ಈ ಹಿಂದಿನ ವ್ಯಕ್ತಿತ್ವ, ಒಬ್ಬ ಉಪನ್ಯಾಸಕಿಯಾಗಿ ನಾವು ಕಂಡ ಅವರ ಆ ದಿನದ ಕ್ಷಣಗಳನ್ನು ನಾವು ಮರೆತಿಲ್ಲ.
ಮನುಷ್ಯನ ಭಾವನೆಗಳನ್ನು ಗರಿಗೆದಸಿರುವ ಕವಿತೆಯಂತೆ ಕವಿತಾ ಅವರ ನೆನಪಿನ ಅಂಗಳ ಸದಾ ನಮ್ಮಲ್ಲಿ ಹಚ್ಚಹಸಿರಾಗಿದೆ. ಇಡೀ ವಿದ್ಯಾರ್ಥಿ ಬಳಗದ ಪರವಾಗಿ ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ. ಕೊನೆಯದಾಗಿ ತುಸು ಸಲುಗೆಯಿಂದಲೇ ಹೇಳುವುದಾದರೆ ಮಾತೃ ವಾತ್ಸಲ್ಯದ ಕವಿತಾ ಅಮ್ಮ, ನಿಮ್ಮ ಎಲ್ಲ ಒಳ್ಳೆಯ ನೆನಪುಗಳು ನಿಮ್ಮೊಂದಿಗಿವೆ. ರೇಷ್ಮೆ ಸೀರೆಯುಟ್ಟು ನಗುವಿನ ಅಂದಗಾತಿಯಾಗಿ ಬರುತ್ತಿದ್ದರೆ ನಿಮ್ಮನ್ನು ನೋಡುವುದೇ ಒಂದು ಚೆಂದ. ನಿಮ್ಮ ಆ ಒಲವಿನ ಜೀವನವೇ ನಮಗೆಲ್ಲರಿಗೂ ಇಂದು ಉತ್ಸಾಹದ ಚಿಲುಮೆ. ಜೀವನವನ್ನು ಪ್ರೀತಿಯಿಂದ ಪ್ರೀತಿಸಿದ ನಿಮಗೆ ನಮ್ಮದೊಂದು ಸಲಾಂ….. ನಿಮ್ಮ ನೆನಪುಗಳು ನಮ್ಮೊಂದಿಗೆ ಸದಾ ಜೀವಂತ.
– ಸುಧಾ ಹುಚ್ಚಣ್ಣವರ.
ಉಪನ್ಯಾಸಕರು, ಗದಗ.



