ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮಾಜದಲ್ಲಿನ ಬಡವರ, ನೊಂದವರ, ಹಿಂದುಳಿದವರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ನಿರಂತರವಾಗಿ ನಿಮ್ಮಿಂದ ಆದಾಗ ಆ ಕಾರ್ಯದ ಫಲ ಶ್ರೇಷ್ಠವಾಗಿರುತ್ತದೆ ಎಂದು ಹೂವಿನ ಶಿಗ್ಲಿಯ ವಿರಕ್ತ ಮಠದ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಅವರು ಶುಕ್ರವಾರ ಪಟ್ಟಣದ ವೀರ ಗಂಗಾಧರ ಸಮುದಾಯದ ಭವನದಲ್ಲಿ ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ ಶಾಸಕ ಡಾ. ಚಂದ್ರು ಲಮಾಣಿ ಅವರ ಜನ್ಮದಿನಾಚರಣೆ ಅಂಗವಾಗಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಅಧ್ಯಯನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ನಾವು ಮಾಡುವ ಕೆಲಸಗಳು ನಮ್ಮನ್ನು ಜನ ಮಾನಸದಲ್ಲಿ ನೆಲೆ ನಿಲ್ಲುವಂತೆ ಮಾಡುತ್ತವೆ. ಶ್ರೇಷ್ಠವಾದ ಮನುಷ್ಯ ಜನ್ಮ ಸಾರ್ಥಕವಾಗಬೇಕಾದಲ್ಲಿ ಉಸಿರಿನ ನಂತರವೂ ಹೆಸರುಳಿಯುವ ಕಾರ್ಯ ಮಾಡಬೇಕು ಮತ್ತು ಅದು ಧರ್ಮ ಮಾರ್ಗದಿಂದ ಕೂಡಿರಬೇಕು. ಅಧಿಕಾರ ಸದಾವಕಾಶದಿಂದ ಜನಪರ ಕಾರ್ಯ ನಿಮ್ಮಿಂದಾಗಲಿ. ಕ್ಷೇತ್ರಕ್ಕೆ ಹಲವಾರು ಜನಪರ ಯೋಜನೆಗಳನ್ನು ತರುವ ಮೂಲಕ ಮಾದರಿ ಕ್ಷೇತ್ರವಾಗಿ ಬದಲಾಯಿಸುವ ಕಾರ್ಯವಾಗಲಿ ಎಂದು ಹಾರೈಸಿದರು.
ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಮಾತನಾಡಿ, ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು. ಸಿಕ್ಕ ಅವಕಾಶ ಬಳಸಿಕೊಳ್ಳುವ ಮೂಲಕ ಬಡಜನರಿಗೆ ನೆರವಾಗಬೇಕು. ದೇವರು ಇನ್ನೂ ಹೆಚ್ಚಿನ ಜನಸೇವೆ ಮಾಡುವ ಭಾಗ್ಯ ನಿಮ್ಮದಾಗಲಿ ಎಂದು ಹೇಳಿದರು.
ವೇದಿಕೆಯ ಮೇಲೆ ಟೋಪಣ್ಣ ಲಮಾಣಿ, ಶಿವಣ್ಣ ಲಮಾಣಿ, ಬಿ.ಎಸ್. ಹರ್ಲಾಪೂರ, ಮಲ್ಲೇಶಪ್ಪ ಲಮಾಣಿ, ಜಾನು ಲಮಾಣಿ, ಶಿಗ್ಲಿ ಯು ರಾಮಣ್ಣ ಲಮಾಣಿ, ನಿಂಗಪ್ಪ ಬನ್ನಿ, ಮಹಾದೇವಪ್ಪ ಅಣ್ಣಿಗೇರಿ, ಸಂತೋಷ ಅಕ್ಕಿ, ಗುರುಪ್ಪ ಲಮಾಣಿ, ಚನ್ನಪ್ಪ ಕೋಲಕಾರ, ಥಾವರೆಪ್ಪ ಲಮಾಣಿ, ಗಂಗಾಧರ ಮೆಣಸಿನಕಾಯಿ, ನೀಲಪ್ಪ ಹತ್ತಿ, ಎಸ್.ಕೆ. ಕಾಳಪ್ಪನವರ, ಬಿ.ಡಿ. ಪಲ್ಲೇದ ಸೇರಿದಂತೆ ಕಾರ್ಯಕರ್ತರು ಇದ್ದರು. ಉಪನ್ಯಾಸಕ ಬಸವರಾಜ ಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕಮ್ಮ ಕೋರದಾಳ ಪ್ರಾರ್ಥಿಸಿದರು. ಕೆ.ಆರ್. ಲಮಾಣಿ, ಈಶ್ವರ ಮೆಡ್ಲೇರಿ ನಿರೂಪಿಸಿದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಶೈಕ್ಷಣಿಕವಾಗಿ ಎಲ್ಲ ಮಕ್ಕಳು ಸಾಧನೆ ಮಾಡಬೇಕು. ಪ್ರತಿಯೊಬ್ಬ ಮಗುವಿಗೂ ಕಲಿಯುವದಕ್ಕೆ ಅವಕಾಶ ಒದಗಿಸಿಕೊಡುವದು ಅವಶ್ಯವಾಗಿದೆ. ಸರಕಾರಿ ಶಾಲೆಗಳಲ್ಲಿರುವ ಮಕ್ಕಳ ಶೈಕ್ಷಣಿಕ ಮಟ್ಟ ಸುಧಾರಿಸಬೇಕು ಎಂಬ ಉದ್ದೇಶದಿಂದ ನೋಟ್‌ಬುಕ್, ಪೂರಕ ಉಪಕರಣ ಮತ್ತು ಉಚಿತ ಟ್ಯೂಷನ್ ಕ್ಲಾಸ್ ಮಾಡಲಾಗುತ್ತಿದೆ. ಸರಕಾರಿ ಶಾಲೆಗಳ ಬಲವರ್ಧನೆಗೆ ಗಮನ ಹರಿಸಲಾಗುತ್ತಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಬAಧಪಟ್ಟ ಸಚಿವರೊಂದಿಗೆ ಸದಾ ಸಂಪರ್ಕದಲ್ಲಿದ್ದೇನೆ. ಜನರ ನಿರೀಕ್ಷೆ ಹುಸಿಯಾಗದಂತೆ ಕ್ಷೇತ್ರದ ಅಭಿವೃದ್ಧಿಗೆ ಸದಾ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರು.