ವಿಜಯಸಾಕ್ಷಿ ಸುದ್ದಿ, ಗದಗ: ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಣ ವೃತ್ತಿಯು ಪವಿತ್ರ ಮತ್ತು ಶ್ರೇಷ್ಠವಾಗಿದೆ. ಶಿಕ್ಷಕ ಸಮೂಹದಿಂದಲೇ ದೇಶದ ಭವಿಷ್ಯ ನಿರ್ಮಾಣವಾಗಲಿದೆ. ಶಿಕ್ಷಕರು ಸೃಜನಾತ್ಮಕ ಕೌಶಲ್ಯಗಳನ್ನು ಬಳಸುವ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟದ ಮೇಲೆ ಪರಿಣಾಮ ಬೀರಿ ಕಲಿಕೆಯನ್ನು ಪರಿಣಾಮಕಾರಿಗೊಳಿಸಿ ಶೈಕ್ಷಣಿಕ ಗುರಿ ಉದ್ದೇಶಗಳನ್ನು ಈಡೇರಿಸುವುದರೊಂದಿಗೆ ಸಾಕ್ಷರ ಸಮುದಾಯ ನಿರ್ಮಿಸುವ ಗುರುತರ ಜವಾಬ್ದಾರಿ ಇಂದಿನ ಶಿಕ್ಷಕ ಸಮುದಾಯದ ಮೇಲಿದೆ ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ನುಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗದಗ ಶಹರ ಘಟಕದ ವತಿಯಿಂದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಹಾಗೂ ಶಿಕ್ಷಕಿ ಫಾತಿಮಾ ಶೇಖರವರ ಜಯಂತ್ಯುತ್ಸವದ ಅಂಗವಾಗಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಆದರ್ಶ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚೀನ ಕಾಲದಲ್ಲಿ ಸ್ತ್ರೀಯು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ, ಆಕೆ ಬಾಲ್ಯದಲ್ಲಿ ತಂದೆ-ತಾಯಿಯ ಆಶ್ರಯದಲ್ಲಿ, ಯೌವನದಲ್ಲಿ ಗಂಡನ ಆಶ್ರಯದಲ್ಲಿ, ಮುಪ್ಪಿನಲ್ಲಿ ಮಕ್ಕಳ ಆಸರೆಯಲ್ಲಿ ಜೀವನ ಕಳೆಯುವ ಪರಿಪಾಠ ಇತ್ತು. ನಂತರದ ಕಾಲಘಟ್ಟದಲ್ಲಿ ಜ್ಞಾನದ ಸಾವಿತ್ರಿಬಾಯಿ ಫುಲೆ ಅವರು ಶೈಕ್ಷಣಿಕ ವ್ಯಾಸಂಗ ಪೂರೈಸಿ ಮಕ್ಕಳ ಜ್ಞಾನದ ಹಸಿವು ನೀಗಿಸಿ ಪ್ರಥಮ ಮಹಿಳಾ ಶಿಕ್ಷಕಿ ಎಂಬ ಖ್ಯಾತಿಯನ್ನು ಗಳಿಸಿದರು. ನಾನು ಸಹ ಅಪರ ಜಿಲ್ಲಾಧಿಕಾರಿಯಾಗುವ ಮುನ್ನ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಬೋಧನೆಯನ್ನು ಮಾಡಿದ್ದೇನೆ. ಪ್ರಸ್ತುತ ಸಮಾಜದಲ್ಲಿ ಶಿಕ್ಷಕ ಹುದ್ದೆಗಿಂತ ಉನ್ನತ ಹುದ್ದೆ ಮತ್ತೊಂದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗದಗ ಶಹರದ ಅಧ್ಯಕ್ಷ ಎಸ್.ಕೆ. ಮಂಗಳಗುಡ್ಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಕರನ್ನು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ನುಗ್ಲಿ, ಎಸ್.ಎನ್. ಬಳ್ಳಾರಿ, ಆರ್.ಎಸ್. ಬುರಡಿ, ವಿ.ಎಂ. ಹಿರೇಮಠ, ಮಂಗಳಾ ತಾಪಸ್ಕರ, ವಿ.ವಿ. ನಡುವಿನಮನಿ, ಎಸ್.ಡಿ. ಕನವಳ್ಳಿ, ಕೆ.ಎ. ಬಳಿಗೇರ, ಅತಿಥಿಗಳಾಗಿ ರವಿ ಗುಂಜೀಕರ, ಬಸವರಾಜ ಬಳ್ಳಾರಿ, ಡಿ.ಎಸ್. ತಳವಾರ, ಮಹೇಶ ಕುರಿ, ಎಸ್.ಪಿ. ಪ್ರಭಯ್ಯನಮಠ, ಶಂಕರ ಹಡಗಲಿ, ಸುರೇಶ ಕೊಪ್ಪದ, ಕೆ.ಬಿ. ಕೊಣ್ಣೂರ, ಎಫ್.ಜೆ. ದಲಬಂಜನ, ಮುತ್ತಪ್ಪ ಮಲಕಶೆಟ್ಟಿ, ಶರಣಪ್ಪ ನಾಗರಳ್ಳಿ, ರವಿ ಕೋಟಿಯವರ, ಶಿವಯೋಗಿ ಬಂಡಿ ಪಾಲ್ಗೊಂಡಿದ್ದರು.
ಯುವ ಮುಖಂಡ ಕೃಷ್ಣಗೌಡ ಎಚ್.ಪಾಟೀಲ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಆದ್ದರಿಂದ ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್‌ರವರ ಬಗ್ಗೆ ಮಕ್ಕಳಲ್ಲಿ ತಿಳುವಳಿಕೆ ನೀಡುವುದು ಅವಶ್ಯವಾಗಿದೆ ಎಂದರು.