ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಬಸ್ತಿಬಣದ ಶ್ರೀ ಮಾರುತಿ ದೇವಸ್ಥಾನ ರಥೋತ್ಸವವು ರವಿವಾರ ಸಂಜೆ ಸಾವಿರಾರು ಭಕ್ತರ ಜಯಘೋಷದ ಮಧ್ಯೆ ವೈಭವದಿಂದ ನಡೆಯಿತು.
ಯುಗಾದಿಯ ನಿಮಿತ್ತ ಮಾರುತಿ ದೇವರಿಗೆ ವಿಶೇಷ ಪೂಜೆ, ಅಲಂಕಾರಗಳನ್ನು ಮಾಡಲಾಗಿತ್ತು. ಸಂಜೆ ರಥೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ನೆರವೇರಿತು. ಜಾತ್ರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳಿಗೆ ಪಟ್ಟಣದ ಕರೆವಡಿಮಠದ ಷ.ಬ್ರ. ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ವಹಿಸಿದ್ದರು.
ಮಾರುತಿ ದೇವಸ್ಥಾನದಲ್ಲಿ ಇರುವ ಬಲಮುರಿ ವಿಘ್ನೇಶ್ವರ, ನವಗ್ರಹ, ಶ್ರೀ ರಾಮ್-ಲಕ್ಷ್ಮಣ-ಸೀತಾಮಾತಾ ಮೂರ್ತಿಗಳಿಗೆ ಮಹಾರುದ್ರಾಭಿಷೇಕ, ಪೂಜೆ ಹೋಮ-ಹವನ ನೆರವೇರಿಸಲಾಯಿತು. ಸೋಮವಾರ ಕಡುಬಿನ ಕಾಳಗ ಸಂಪ್ರದಾಯದಂತೆ ನೆರವೇರಿತು. ಮಾರುತಿ ದೇವಸ್ಥಾನ ಕಮಿಟಿಯವರು, ಸಾರ್ವಜನಿಕರು, ಅನೇಕ ಮುಖಂಡರು ಹಾಜರಿದ್ದರು.
ಅಡರಕಟ್ಟಿ ಗ್ರಾಮದಲ್ಲಿ ಭಾನುವಾರ ಯುಗಾದಿ ಹಬ್ಬದ ದಿನ ಗ್ರಾಮದ ಆರಾಧ್ಯ ದೈವ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ಮತ್ತು ಶಿಗ್ಲಿ ಗ್ರಾಮದಲ್ಲಿ ಮಾರುತಿ ಜಾತ್ರಾ ಮಹೋತ್ಸವದ ಅಂಗವಾಗಿ ಅಪಾರ ಭಕ್ತ ಸಮೂಹದ ನಡುವೆ ರಥೋತ್ಸವ, ಸೋಮವಾರ ಕಡುಬಿನ ಕಾಳಗ ನೆರವೇರಿತು. ಅಡರಕಟ್ಟಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮುಂದೆ ಜೋಡೆತ್ತುಗಳ ಮೂರ್ತಿ ಸ್ಥಾಪನೆ ಮತ್ತು ಜೋಡೆತ್ತುಗಳ ಮೆರವಣಿಗೆ ನಡೆಸಲಾಯಿತು.



