ಹಾವೇರಿ: ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಬುಧವಾರ ಸಂಜೆ ಕಾರ್ಣಿಕೋತ್ಸವ ನಡೆಯಿತು.
ಪ್ರತಿ ವರ್ಷ ಆಯುಧ ಪೂಜೆ ದಿನದಂದು ನಡೆದ ಈ ಉತ್ಸವದಲ್ಲಿ, ಗೊರವಪ್ಪ ನಾಗಪ್ಪ ಅವರು ಸುಮಾರು 20 ಅಡಿ ಎತ್ತರದ ಬಿಲ್ಲನ್ನು ಏರಿದರು. ಅಲ್ಲಿಂದ “ಬಂಗಾರದ ಗಿಂಡಿಲೇ ನಾಡಿಗೆ ಸಿರಿ ಆಯಿತಲೇ ಪರಾಕ್” ಎಂದು ಭವಿಷ್ಯ ನುಡಿದರು. ನಂತರ ಬಿಲ್ಲು ಏರಿದ್ದ ಗೊರವಪ್ಪ ಕೆಳಗೆ ಧುಮುಕಿದರು. ಭಕ್ತರು ಅವರನ್ನು ನೆಲಕ್ಕೆ ಬೀಳದಂತೆ ಹಿಡಿದರು. ಚಂಗಮಲೋ ಚಂಗಮಲೋ… ಏಳು ಕೋಟಿಗೊ ಏಳುಕೋಟಿಗೂ ಎಂದು ಘೋಷಣೆ ಕೂಗಿದರು.
ಕಾರ್ಣಿಕದ ವಿಶ್ಲೇಷಣೆ:
ಗೊರವಯ್ಯನವರ ಈ ದೈವವಾಣಿಯನ್ನು ಕ್ಷೇತ್ರದ ವಿದ್ವಾಂಸರು ಮತ್ತು ಭಕ್ತರು ವಿಶ್ಲೇಷಿಸಿದ್ದಾರೆ. ನಾಡಿನ ಜನತೆ ವಿದೇಶಿ ವಸ್ತು ಬಹಿಷ್ಕರಿಸಿ ಸ್ವದೇಶಿ ವಸ್ತು ಬಳಕೆಗೆ ಮುಂದಾಗಲಿದ್ದಾರೆ. ದೇಶ ಶಾಂತಿ, ಸಮೃದ್ಧಿಯಿಂದ ಇರಲಿದೆ. ಮಳೆ ಬೆಳೆ ಚನ್ನಾಗಿ ಬರಲಿವೆ. ಆರೋಗ್ಯ ಸಂಪತ್ತು ಹೆಚ್ಚಾಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಗವಿಸಿದ್ದಪ್ಪ ದ್ಯಾಮಣ್ಣನವರ ಹಾಗೂ ದೇವಸ್ಥಾನ ಕಮಿಟಿ ಚೇರ್ಮನ್ ಭರಮಪ್ಪ ಊರ್ಮಿ ಕಾರ್ಣಿಕ ನುಡಿಯನ್ನು ವಿವರಿಸಿದ್ದಾರೆ.



