ಬೆಂಗಳೂರು: ಕಾಂಗ್ರೆಸ್ ಶಾಸಕರ ಅಸಮಾಧಾನ ಶಮನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮುಖ ಕ್ರಮ ಕೈಗೊಂಡಿದ್ದು, ರಾಜ್ಯದ ಪ್ರತಿಯೊಬ್ಬ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ₹50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಈ ಅನುದಾನವನ್ನು ಮುಖ್ಯಮಂತ್ರಿಯ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ನೇರ ಬಂಡವಾಳದ ರೂಪದಲ್ಲಿದೆ.
ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಜುಲೈ 30, 31ರಂದು ಶಾಸಕರ ಜತೆ ಸಭೆ ನಡೆಸಲಿದ್ದಾರೆ. ಶಾಸಕರು ಬೇಡಿಕೆ ಪತ್ರದೊಂದಿಗೆ ಕಾಮಗಾರಿ ವಿವರ ನೀಡಲು ಸೂಚನೆ ನೀಡಲಾಗಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ಬಂದು ಶಾಸಕರ ಹಾಗೂ ಸಚಿವರ ಜತೆ ಒನ್ ಟು ಒನ್ ಮಾತುಕತೆ ನಡೆಸಿದ ಬೆನ್ನಲ್ಲೇ ಸಿದ್ದರಾಮಯ್ಯ ಈ ಕ್ರಮ ಕೈಗೊಂಡಿದ್ದಾರೆ.
ಸಿದ್ದರಾಮಯ್ಯ ಪತ್ರದಲ್ಲೇನಿದೆ?
‘2025-26 ಸಾಲಿನ ರಾಜ್ಯ ಆಯವ್ಯಯದಲ್ಲಿ ಘೋಷಿಸಲಾದ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ.ಗಳ ವಿಶೇಷ ಅನುದಾನ ಹಂಚಿಕೆ ಮಾಡಲಾಗುವುದು.
ಮುಖ್ಯಮಂತ್ರಿಯವರಿಗೆ ಬರೆದ ತಮ್ಮ ಬೇಡಿಕೆ ಪತ್ರದೊಂದಿಗೆ, ಇದರೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಕಾಮಗಾರಿಗಳ ವಿವರಗಳನ್ನು ನೀಡುವುದು. ದಿನಾಂಕ:30.07.2025 ಹಾಗೂ ದಿನಾಂಕ:31.07.2025ರಂದು ಜಿಲ್ಲಾವಾರು ವಿಧಾನಸಭಾ ಸದಸ್ಯರ ಸಭೆಯನ್ನು ಕೊಠಡಿ ಸಂಖ್ಯೆ-313, ಸಮಿತಿ ಕೊಠಡಿ, 3ನೇ ಮಹಡಿ, ವಿಧಾನಸೌಧ ಇಲ್ಲಿ ಏರ್ಪಡಿಸಲಾಗಿದೆ.
ಸದರಿ ಸಭೆಯ ವಿವರಗಳನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು, ಮೇಲ್ಕಂಡಂತೆ ಕಾಮಗಾರಿಗಳ ವಿವರಗಳೊಂದಿಗೆ ಸಭೆಗೆ ಹಾಜರಾಗುವುದು’ ಎಂದು ಸಿದ್ದರಾಮಯ್ಯ ಅವರ ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅನುದಾನ ಬಿಡುಗಡೆ ವಿಚಾರವಾಗಿ ಕಾಂಗ್ರಸ್ನ ಎಲ್ಲ ಶಾಸಕರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಅದೇ ರೀತಿ, ಶಾಸಕಾಂಗ ಪಕ್ಷದ ಕಚೇರಿಯಿಂದಲೂ ಶಾಸಕರಿಗೆ ಮಾಹಿತಿ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ.



