ಬೆಂಗಳೂರು: ಅನ್ನ ಭಾಗ್ಯ ಯೋಜನೆ ಆರಂಭದಲ್ಲಿ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ಕೇಂದ್ರ ಸರ್ಕಾರದಿಂದ ಸರಿಯಾಗಿ ಸ್ಪಂದನೆ ಸಿಗದೇ ಇದ್ದಾಗ ರಾಜ್ಯ ಸರ್ಕಾರ ಅನ್ನಭಾಗ್ಯದ ಹಣ ನೀಡಲಾಗುವುದು ಎಂದು ತಿಳಿಸಿತ್ತು.
ಅದರಂತೆ ಸರ್ಕಾರ ಒಂದು ಕೆಜಿ ಅಕ್ಕಿಗೆ 34 ರೂ. ಪಾವತಿ ಮಾಡಬೇಕಿತ್ತು. ಒಂದು ಪಡಿತರ ಕುಟುಂಬದಲ್ಲಿ ಐವರು ಸದಸ್ಯರಿದ್ದರೆ 20 ಕೆಜಿಗೆ ಅಕ್ಕಿಗೆ ಪ್ರತಿ ತಿಂಗಳು 850 ರೂ. ಜಮೆ ಮಾಡಬೇಕಿತ್ತು. ಆದ್ರೆ ಕಳೆದ 2 ತಿಂಗಳಿನಿಂದಲೂ ಯಾವುದೇ ಹಣ ಜಮೆಯಾಗದ ಹಿನ್ನೆಲೆಯಲ್ಲಿ ಈ ಬಗ್ಗೆ ಫಲಾನುಭವಿಗಳು ಅಧಿಕಾರಿಗಳನ್ನು ಪ್ರಶ್ನಿಸಿದ್ದರು.
ಇದೀಗ ಕೇಂದ್ರ ಸರ್ಕಾರದಿಂದ ಅಕ್ಕಿ ಲಭ್ಯವಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಒಎಂಎಸ್‌ಎಸ್ ಯೋಜನೆ ಅಡಿಯಲ್ಲಿ ಖರೀದಿಸಿ ಈ ತಿಂಗಳಿನಿಂದಲೇ ಅಕ್ಕಿ ವಿತರಿಸಲು ತೀರ್ಮಾನಿಸಿದೆ. ಈ ಸಂಬಂಧ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಪ್ರಕಟಣೆ ಹೊರಡಿಸಿದ್ದಾರೆ.