ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ಅವಳಿ ನಗರವನ್ನು ಹಲವು ದಶಕಗಳಿಂದಲೂ ಬಾಧಿಸುತ್ತಿರುವ ಗಂಭೀರ ಸಮಸ್ಯೆಯಾದ ಕುಡಿಯುವ ನೀರಿನ ವಿಷಯ ಬುಧವಾರ ವಿಧಾನ ಪರಿಷತ್‌ನಲ್ಲಿ ಸದ್ದು ಮಾಡಿತು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ಗಂಭೀರ ಸಮಸ್ಯೆಯನ್ನು ವಿಧಾನಪರಿಷತ್‌ನಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಪ್ರಸ್ತಾಪಿಸಿದಾಗ, ಇನ್ನು ನಾಲ್ಕು ವಾರಗಳಲ್ಲಿ ಸಮಸ್ಯೆ ಇತ್ಯರ್ಥಗೊಳಿಸಿ ಸಮರ್ಪಕ ಕುಡಿಯುವ ನೀರಿನ ಸಂಪರ್ಕ ಒದಗಿಸಲು ಸರಕಾರ ಬದ್ಧವಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬಿ.ಎಸ್. ಸುರೇಶ ಭರವಸೆ ನೀಡಿದರು.
ಗದಗ-ಬೆಟಗೇರಿ ಅವಳಿ ನಗರಕ್ಕೆ ೨೪*೭ ಕುಡಿಯುವ ನೀರಿನ ಯೋಜನೆಯನ್ನು ಏಷ್ಯನ್ ಅಭಿವೃದ್ಧಿ ನೆರವಿನ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕೆ ಕಾರ್ಯಕ್ರಮ (ಎನ್‌ಕೆಯುಎಸ್‌ಐಪಿ) ಯೋಜನೆಯಡಿ ದಿನಾಂಕ ೨೪-೧೨-೨೦೧೪ರಂದು ಮೆ.ಎಸ್‌ಪಿಎಂಎಲ್ ಇನ್ಫಾç ಲಿ. ಗುರಗಾಂವ, ನವದೆಹಲಿ ಅವರಿಗೆ ೩೦ ತಿಂಗಳು ಕಾಲಾವಕಾಶ ನೀಡಿ ಗುತ್ತಿಗೆ ನೀಡಲಾಗಿತ್ತು. ೨೩-೬-೨೦೧೭ಕ್ಕೆ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಗದಗ-ಬೆಟಗೇರಿ ನಗರದ ಭೌಗೋಳಿಕಕ್ಕೆ ಅನುಗುಣವಾಗಿ ೧೪ ವಲಯಗಳನ್ನಾಗಿ ವಿಂಗಡಿಸಿ, ಅದರಲ್ಲಿ ೭ ವಲಯಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಹೊಸ ಕೊಳವೆ ಮಾರ್ಗದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದ ಏಳು ವಲಯಗಳಲ್ಲಿ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಭಾಗಶಃ ಹೊಸ ಕೊಳವೆ ಮಾರ್ಗದ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಕಾಮಗಾರಿ ಪ್ರಗತಿಯಲ್ಲಿದ್ದಾಗ ಹೆಚ್ಚುವರಿ ಪರಿಣಾಮಗಳ ಅವಶ್ಯಕತೆ ಬಂದ ಕಾರಣ ಹಾಗೂ ಗುತ್ತಿಗೆದಾರರ ವಿಳಂಬದಿಂದ ಗುತ್ತಿಗೆ ಅವಧಿಯನ್ನು ವಿಸ್ತರಿಸಿ ೩೦-೪-೨೦೨೩ರೊಳಗೆ ಕಾಮಗಾರಿಯನ್ನು ಸಂಪೂರ್ಣಗೊಳಿಸಲು ಅಂತಿಮ ಗಡುವು ನೀಡಲಾಗಿತ್ತು. ಆದರೆ, ಗುತ್ತಿಗೆದಾರರು ಡಿಸೆಂಬರ ೨೦೨೨ರಿಂದ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಗುತ್ತಿಗೆದಾರರಿಗೆ ೨೭-೬-೨೦೨೩ರಂದು ನೋಟೀಸ್ ನೀಡಲಾಗಿದೆ. ಬ್ಯಾಂಕ್ ಗ್ಯಾರಂಟಿಯನ್ನು ನಗದೀಕರಿಸಲು ಬ್ಯಾಂಕ್‌ನವರಿಗೆ ಪತ್ರ ಬರೆಯಲಾಗಿದೆ. ಗುತ್ತಿಗೆದಾರರು ನೋಟೀಸ್ ಹಾಗೂ ಬ್ಯಾಂಕ್ ಗ್ಯಾರಂಟಿ ನಗದೀಕರಿಸುವುದನ್ನು ಪ್ರಶ್ನಿಸಿ ಕೊಲ್ಕತ್ತಾ ನ್ಯಾಯಾಲಯದಲ್ಲಿ ದಿನಾಂಕ ೫-೭-೨೦೨೩ರಂದು ತಡೆಯಾಜ್ಞೆ ತಂದಿದ್ದಾರೆ.
ನುರಿತ ವಕೀಲರನ್ನು ನೇಮಿಸಲಾಗಿದ್ದು, ಕೋಲ್ಕತ್ತಾ ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ತೆರವುಗೊಳಿಸಲು ಕ್ರಮ ವಹಿಸಲಾಗುತ್ತಿದೆ. ಆರ್ಬಿಟರ್‌ನ್ನು ನೇಮಸಲು ಗುತ್ತಿಗೆದಾರರು ಉಚ್ಛ ನ್ಯಾಯಾಲಯಕ್ಕೆ ಹೋದ ಕಾರಣ ಪ್ರಕರಣ ನ್ಯಾಯಾಲಯದಲ್ಲಿ ಪ್ರಗತಿಯಲ್ಲಿದೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವುಗೊಂಡ ಬಳಿಕ ನಿಯಮಾನುಸಾರ ಕ್ರಮವಹಿಸಿ ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಎನ್‌ಕೆಯುಎಸ್‌ಐಪಿ ಯೋಜನೆಯಡಿ ಸಗಟು ನೀರು ಸರಬರಾಜು ಕಾಮಗಾರಿಯಡಿ ೨೦೧೪-೧೫ರಲ್ಲಿ ಪಾಪನಾಶಿ ಗ್ರಾಮದ ಬಳಿಯ ನೀರು ಶುದ್ಧೀಕರಣ ಘಟಕದಿಂದ ಗದಗ-ಬೆಟಗೇರಿ ಎ ಪಾಯಿಂಟ್‌ವರೆಗೆ ಬಿಡಬ್ಲ್ಯೂಎಸ್‌ಸಿ ಪೈಪ್‌ಲೈನ್ ಅಳವಡಿಸಲಾಗಿದೆ. ಗದಗ-ಬೆಟಗೇರಿ ನಗರಸಭೆಗೆ ಅಮೃತ ೨.೦ ಯೋಜನೆಯಡಿ ಅಂದಾಜು ಮೊತ್ತ ೩೪ ಕೋಟಿ ರೂ.ಗಳಲ್ಲಿ ನೀರು ಸರಬರಾಜು ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೆತ್ತಿಕೊಳ್ಳಲು ಸರಕಾರದ ಆದೇಶ ಸಂಖ್ಯೆ:ನಅಇ೨೧ಸಿಎಸ್‌ಎಸ್ ೨೦೨೧(೧) ದಿನಾಂಕ ೨-೧೨-೨೦೨೩ರಂದು ಆದೇಶಿಸಲಾಗಿದೆ. ಅದರಂತೆ ಸರ್ವೇ ಕಾರ್ಯ ಕೈಗೊಂಡಿದ್ದು, ಯೋಜನಾ ವರದಿ ತಯಾರಿಸಲಾಗುತ್ತಿದೆ. ಶೀಘ್ರವಾಗಿ ಅಂದಾಜನ್ನು ಮಂಡಳಿಯ ತಾಂತ್ರಿಕ ಮತ್ತು ಟೆಂಡರ್ ಪರಿಶೀಲನಾ ಸಭೆಯಲ್ಲಿ ಮಂಡಿಸಿ ರಾಜ್ಯ ಮಟ್ಟದ ಉನ್ನತ ಸಂಚಾಲನಾ ಸಮಿತಿ ಮುಂದೆ ಅನುಮೋದನೆಗಾಗಿ ಮಂಡಿಸಲಾಗುಗುವು ಎಂದು ಸಚಿವ ಬಿ.ಎಸ್. ಸುರೇಶ ತಿಳಿಸಿದರು.
ಅಧಿಕಾರಿಗಳು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ವಿ.ಪ ಸದಸ್ಯ ಎಸ್.ವಿ ಸಂಕನೂರ ಹೇಳಿದರು. ಆಗ ಮಧ್ಯೆ ಪ್ರವೇಶಿಸಿದ ವಿಧಾನಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಸಚಿವರೇ ಗದಗ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಂಬAಧಿಸಿದ ಅಧಿಕಾರಿಗಳ ಸಭೆ ನಡೆಸಿ ಶೀಘ್ರ ಕುಡಿಯುವ ನೀರಿನ ಸಮಸ್ಯೆ ಬಗೆಹಿಸಿ ಎಂದು ಹೇಳಿದರು.