ಈ ವರ್ಷದ ಅತಿದೊಡ್ಡ ಹಿಟ್ ಸಿನಿಮಾಗಳ ಪಟ್ಟಿಗೆ ‘ಧುರಂಧರ್’ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ರಣ್ವೀರ್ ಸಿಂಗ್ ಅಭಿನಯದ ಈ ಸಿನಿಮಾ ಬಿಡುಗಡೆ ಆದ ಕೆಲವೇ ದಿನಗಳಲ್ಲಿ 1000 ಕೋಟಿ ರೂ. ಗಳಿಕೆ ದಾಟಿದ್ದು, ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.
ಭಾರತೀಯ ಸೈನಿಕನೊಬ್ಬ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ತೆರಳಿ, ಅಲ್ಲಿ ನಡೆಯುವ ಚಟುವಟಿಕೆಗಳ ಮಾಹಿತಿಯನ್ನು ಭಾರತೀಯ ಸೇನೆಗೆ ರವಾನೆ ಮಾಡುವ ಕಥೆಯನ್ನು ‘ಧುರಂಧರ್’ ಸಿನಿಮಾ ಹೊಂದಿದೆ. ನಿಜ ಘಟನೆಗಳಿಂದ ಸ್ಪೂರ್ತಿ ಪಡೆದ ಈ ಸಿನಿಮಾದಲ್ಲಿ ಕೆಲವು ನೈಜ ಪಾತ್ರಗಳು ಹಾಗೂ ಸ್ಥಳಗಳ ಉಲ್ಲೇಖವೂ ಇದೆ.
ಇದೀಗ ಸಿನಿಮಾದ ವಿಷಯ ಸಂಬಂಧ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಮಧ್ಯಪ್ರವೇಶ ಮಾಡಿದ್ದು, ಸಿನಿಮಾದ ಎರಡು ಹೆಸರನ್ನು ತೆಗೆದುಹಾಕಲು ಹಾಗೂ ಒಂದು ಸಂಭಾಷಣೆಯನ್ನು ಬದಲಾಯಿಸುವಂತೆ ನಿರ್ದೇಶನ ನೀಡಿದೆ. ಇದರ ಬೆನ್ನಲ್ಲೇ ನಿರ್ಮಾಪಕರು ಹಾಗೂ ವಿತರಕರು ಚಿತ್ರಮಂದಿರಗಳಿಗೆ ಇ-ಮೇಲ್ ಕಳುಹಿಸಿ, ಹೊಸ ಆವೃತ್ತಿಯನ್ನೇ ಪ್ರದರ್ಶಿಸುವಂತೆ ಸೂಚಿಸಿದ್ದಾರೆ.
ಸರ್ಕಾರದ ಸೂಚನೆಯಂತೆ ಸಿನಿಮಾದಲ್ಲಿ ಪಾಕಿಸ್ತಾನದ ಬಲೂಚಿಸ್ತಾನ್ ಪ್ರದೇಶವನ್ನು ಸೂಚಿಸುವ ‘ಬಲೂಚ್’ ಪದವನ್ನು ತೆಗೆದುಹಾಕಲಾಗಿದೆ. ಜೊತೆಗೆ ಇನ್ನೊಂದು ಹೆಸರನ್ನೂ ಅಳಿಸಲಾಗಿದ್ದು ಅಥವಾ ಬೀಪ್ ಮಾಡಲಾಗಿದೆ. ತಿದ್ದುಪಡಿ ಮಾಡಲಾದ ಈ ಹೊಸ ಆವೃತ್ತಿ ಜನವರಿ 1ರಿಂದ ಪ್ರದರ್ಶನ ಆರಂಭಿಸಿದೆ.
ಆದಿತ್ಯ ಧಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನ, ಆರ್. ಮಾಧವನ್, ಸಂಜಯ್ ದತ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ನಾಯಕಿಯಾಗಿ ಸಾರಾ ಅರ್ಜುನ್ ಅಭಿನಯಿಸಿದ್ದಾರೆ.



