ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಮಕ್ಕಳಲ್ಲಿನ ಬುದ್ಧಿಶಕ್ತಿ ವಿಕಸನಗೊಳಿಸಿ, ಧರ್ಮ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ತುಂಬಿ, ಆತ್ಮಸ್ಥೈರ್ಯವನ್ನು ಗಟ್ಟಿಗೊಳಿ, ಜವಾಬ್ದಾರಿಯುತ ವ್ಯಕ್ತಿಯನ್ನಾಗಿಸುವುದು ಶಿಕ್ಷಣದ ಮೂಲ ಆಶಯವಾಗಿದೆ ಎಂದು ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಸೋಮವಾರ ಲಕ್ಮೇಶ್ವರದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಅಮೃತ ಮಹೋತ್ಸವ ಹಾಗೂ ಬಳಗದ ಪ್ರೌಢಶಾಲೆ ಮತ್ತು ಜ.ರೇಣುಕಾಚಾರ್ಯ ಸಂಸ್ಕೃತ ಪಾಠಶಾಲೆಯ ಸುವರ್ಣ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ದೇಶದ ಇತಿಹಾಸದಲ್ಲಿ ಶಿಕ್ಷಣ ಸೇರಿ ತ್ರಿವಿಧ ದಾಸೋಹಕ್ಕೆ ಮಠ-ಮಾನ್ಯಗಳ ಕೊಡುಗೆ ಅಪಾರ. ನಡೆದಾಡಿದ ದೇವರು ಲಿಂ. ವೀರಗಂಗಾಧರ ಜಗದ್ಗುರುಗಳ ಅಭಯಾಶೀರ್ವಾದದಿಂದ 1946ರಲ್ಲಿ ಮಹಿಳೆಯರ ಕ್ರಿಯಾಶೀಲ ಚಿಂತನೆಗಳಿಂದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಪ್ರಾರಂಭಗೊಂಡು ಶ್ರೇಷ್ಠ ಚಿಂತನೆಗಳೊಂದಿಗೆ ಶಿಕ್ಷಣದ ಜತೆಗೆ ಧರ್ಮ, ಸಂಸ್ಕಾರ, ಮೌಲ್ಯಗಳನ್ನು ಬಿತ್ತುತ್ತಾ ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾಗಿ ಅವರನ್ನು ಸುಸಂಸ್ಕೃತ ನಾಗರಿಕರನ್ನಾಗಿಸುತ್ತಿರುವ ಶಿಕ್ಷಣ ಸಂಸ್ಥೆ ಕಾರ್ಯ ಶ್ಲಾಘನೀಯ. ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂಬುದನ್ನು ಪಾರ್ವತಿ ಬಳಗ ಸಾಬೀತುಪಡಿಸಿದೆ. ಶಿಕ್ಷಣ ಸೇವೆಯೇ ಧ್ಯೇಯವಾಗಿಸಿಕೊಂಡಿರುವ ತಾಯಿ ಪರ್ವತಿ ಮಕ್ಕಳ ಬಳಗದ ಶಿಕ್ಷಣ ಸಂಸ್ಥೆ ಉತ್ತರೋತ್ತರವಾಗಿ ಪ್ರಗತಿ ಹೊಂದಲೆಂಬ ಶುಭಾಶೀರ್ವಚನಗೈದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿ.ಪ ಸದಸ್ಯ ಎಸ್.ವಿ. ಸಂಕನೂರ, ಮಕ್ಕಳಿಗೆ ಪಠ್ಯ ಶಿಕ್ಷಣದೊಂದಿಗೆ ಕೌಶಲ್ಯ, ಜಗತ್ತಿನ ಎಲ್ಲ ಕ್ಷೇತ್ರಗಳ ಜ್ಞಾನ ಬೆಳೆಸಬೇಕಾಗಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಿರುವುದು ದುರ್ದೈವದ ಸಂಗತಿ. ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಆದರೆ ರಾಜ್ಯದಲ್ಲಿ 57680 ಶಿಕ್ಷಕರ ಮತ್ತು ಅಗತ್ಯ ಸೌಲಭ್ಯಗಳ ಕೊರತೆ ಶಿಕ್ಷಣ ಕ್ಷೇತ್ರದ ಹಿನ್ನಡೆಗೆ ಕಾರಣವಾಗಿದೆ. ಇದು ಒಳ್ಳೆಯ ಬೆಳವಣೆಗೆಯಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ಹೆಚ್ಚಿಸಿ ಸರ್ವ ಸನ್ನದ್ಧಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು, ಪಾಲಕರು ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಮಕ್ಕಳೂ ಸಹ ಸಾಧಿಸುವ ಛಲದೊಂದಿಗೆ ಶ್ರದ್ಧೆ, ಸತತ ಅಭ್ಯಾಸದ ಮೂಲಕ ಸುಂದರ ಭವಿಷ್ಯ ಕಟ್ಟಿಕೊಳ್ಳುವ ಸಂಕಲ್ಪ ಮಾಡಬೇಕು ಎಂದರು.
ಸಂಸ್ಥೆಯ ಉಪಾಧ್ಯಕ್ಷೆ ಜಯಲಕ್ಷ್ಮೀ ಮಹಾಂತಶೆಟ್ಟರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷೆ ಸುವರ್ಣಬಾಯಿ ಬಹದ್ದೂರದೇಸಾಯಿ, ಮಾಜಿ ಶಾಸಕರಾದ ಜಿ.ಎಸ್ ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ಡಿ.ಬಿ. ಬಳಿಗಾರ, ರೋಹಿಣಿಬಾಯಿ ಬಹದ್ದೂರದೇಸಾಯಿ, ಲಲಿತಕ್ಕ ಕೆರಿಮನಿ, ಶರಣಮ್ಮ ಲಿಂಬಯ್ಯಸ್ವಾಮಿಮಠ, ಶಿವಲೀಲಾ ಹಿರೇಮಠ, ಗೌರಮ್ಮ ಮಹಾಂತಶೆಟ್ಟರ, ರಾಜೇಶ್ವರಿ ಪಾಟೀಲ ಸೇರಿದಂತೆ ಅನೇಕರಿದ್ದರು. ಸಂಸ್ಥೆಯ ಕಾರ್ಯದರ್ಶಿ ಜಯಲಕ್ಷ್ಮೀ ಗಡ್ಡದೇವರಮಠ ಪ್ರಾಸ್ತಾವಿಕ ನುಡಿದರು. ಶಾರದಾ ಮಹಾಂತಶೆಟ್ಟರ ಸ್ವಾಗತಿಸಿದರು. ತಾಲೂಕಾ ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ರಮೇಶ ನವಲೆ, ಶಿಕ್ಷಕರಾದ ದೀಪಾ ಆದಿ, ಜ್ಯೋತಿ ಮುಳಗುಂದ, ಜಗದೀಶ ಶಿರಹಟ್ಟಿ ನಿರೂಪಿಸಿದರು.
ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಸ್.ಬಿ. ವಸ್ತçದಮಠ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿಗೆ ಗುರು-ಹಿರಿಯರ ಆಶೀರ್ವಾದ, ಸಹಕಾರದಿಂದ ಮಹಿಳೆಯರೇ ಕಟ್ಟಿ ಹೆಮ್ಮರವಾಗಿ ಬೆಳೆಸಿ ಸಮಾಜಕ್ಕೆ ಸತ್ಪಲ ನೀಡುತ್ತಿರುವ ತಾಯಿ ಪಾರ್ವತಿ ಮಕ್ಕಳ ಬಳಗದ ಕಾರ್ಯ ಪ್ರಶಂಸನೀಯ ಎಂದರು.