ವಿಜಯಸಾಕ್ಷಿ ಸುದ್ದಿ, ಗದಗ : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರ್ಕಾರ ಹೆಸರು ಖರೀದಿ ಕೇಂದ್ರ ಆರಂಭಿಸಿರುವುದು ಸ್ವಾಗತಾರ್ಹ ಎಂದು ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಸಂಘದಿಂದ ಹೆಸರು ಕಾಳು ಖರೀದಿ ಕೇಂದ್ರ ಆರಂಭಿಸುವಂತೆ ಮನವಿ ಸಲ್ಲಿಸಿತ್ತು. ರೈತರ ಮನವಿಗೆ ಸ್ಪಂದಿಸಿರುವ ಸರಕಾರ ಶೀಘ್ರವೇ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಕೇಂದ್ರ ಆರಂಭಿಸುವಂತೆ ಸೂಚಿಸಿರುವುದು ಅಭಿನಂದನಾರ್ಹವಾಗಿದೆ ಎಂದಿದ್ದಾರೆ.
ಪ್ರತಿ ಒಂದು ಕ್ವಿಂಟಲ್‌ಗೆ 8682 ರೂ ಹಾಗೂ ಪ್ರತಿ ರೈತರಿಂದ ಗರಿಷ್ಠ 4 ಕ್ವಿಂಟಲ್ ಉತ್ತಮ ಗುಣಮಟ್ಟದ ಹೆಸರು ಕಾಳು ಖರೀದಿಸಲಾಗುತ್ತದೆ. ರೈತರು ಈ ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದ್ದಾರೆ.
ಹುಚ್ಚೀರಪ್ಪ ಜೋಗಿನ ಶರಣಪ್ಪ ಜೋಗಿನ, ಬಾಳಪ್ಪ ಗಂಗರಾತ್ರಿ, ಗಿರೀಶ ಗುಡ್ಲಾನೂರ, ರಾಮಪ್ಪ ಹಚ್ಚಪ್ಪನವರ, ರಾಮಣ್ಣ ಖಂಡ್ರಿ ಸೇರಿದಂತೆ ಅನೇಕ ರೈತ ಮುಖಂಡರು ಈ ಪ್ರಕ್ರಿಯೆಯನ್ನು ಸ್ವಾಗತಿಸಿದ್ದಾರೆ.