ಬೆಂಗಳೂರು: ಹೆಬ್ಬಾಳ್ಕರ್ ಮತ್ತು ಎಂಎಲ್ಸಿ ಸಿ.ಟಿ. ರವಿ ನಡುವೆ ನಡೆದ ಘಟನೆ ಅಂತ್ಯಗೊಂಡಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಎಂಎಲ್ಸಿ ಸಿ.ಟಿ. ರವಿ ನಡುವೆ ನಡೆದ ಘಟನೆ ಈಗಾಗಲೇ ಅಂತ್ಯಗೊಂಡಿದೆ.
ಡಿಸೆಂಬರ್ 19 ರಂದೇ ಅದನ್ನು ನಾನು ಅಂತ್ಯಗೊಳಿಸಿದ್ದೇನೆ. ಅದು ಈಗ ಪರಿಷತ್ ನ ಎಥಿಕ್ಸ್ ಸಮಿತಿ ಮುಂದೆ ಇದೆ. ಎಥಿಕ್ಸ್ ಸಮಿತಿ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ಶಾಸಕರಿಗೆ ವಿಶ್ರಾಂತಿಗೆ ಆರಾಮ ಕುರ್ಚಿ ವ್ಯವಸ್ಥೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಪರಿಷತ್ನಲ್ಲಿ ಆಸಕ್ತಿಯಿಂದ ಸದಸ್ಯರು ಕೂರುತ್ತಾರೆ. ಮಧ್ಯಾಹ್ನ ಊಟವಾದ ಮೇಲೂ ಸದಸ್ಯರು ಇರುತ್ತಾರೆ. ನಮ್ಮಲ್ಲಿ ಅಂತಹ ಪರಿಸ್ಥಿತಿ ಬಂದಿಲ್ಲ. ಇನ್ನೊಂದು ಸದನದ ಬಗ್ಗೆ ನಾನು ಮಾತಾಡುವುದು ಸೂಕ್ತ ಅಲ್ಲ ಎಂದರು.
ಉಪಸಭಾಪತಿ ಎಂಕೆ ಪ್ರಾಣೇಶ್ ಎಂಎಲ್ಸಿ ಸ್ಥಾನಕ್ಕೆ ಆಯ್ಕೆ ಕುರಿತು ಮರು ಮತ ಎಣಿಕೆ ನಡೆದ ವಿಚಾರವಾಗಿ ಮಾತನಾಡಿದ ಅವರು, ಮತ ಎಣಿಕೆ ನಡೆದಿದೆ. ಈ ವಿಚಾರ ಈಗ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ತೀರ್ಮಾನ ಮಾಡುತ್ತದೆ. ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ಹೇಳಿದರು.