HomeGadag Newsವರ್ಣನೆಗೆ ನಿಲುಕದ ಕಪ್ಪತ್ತಗುಡ್ಡದ ಸೌಂದರ್ಯ

ವರ್ಣನೆಗೆ ನಿಲುಕದ ಕಪ್ಪತ್ತಗುಡ್ಡದ ಸೌಂದರ್ಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಿಸಿದ ನಂತರ ಕಪ್ಪತ್ತಗಿರಿಯ ಸೊಗಸಿಗೆ ಮತ್ತಷ್ಟು ರಮ್ಯತೆ ಮೂಡಿದೆ. ಕುರುಚಲು ಕಾಡಿನ ಸೊಬಗು ದಿನೇ ದಿನೇ ಹೆಚ್ಚುತ್ತಿದೆ. ಖನಿಜ ನಿಕ್ಷೇಪಗಳು ಸುರಕ್ಷಿತಗೊಂಡಿವೆ. ಔಷಧೀಯ ಗುಣವುಳ್ಳ ಸಸ್ಯ ಸಂಪತ್ತು ವೃದ್ಧಿಸಿ, ಕನ್ನಡ ನಾಡಿನ ಶುದ್ಧ ಗಾಳಿಯ ತಾಣದ ಜೀವನಾಡಿ ಎನಿಸಿದೆ. ಈ ಹಸಿರು ಸರಪಳಿಯ ಜತೆಗೆ ಇಲ್ಲಿನ ವನ್ಯಜೀವಿಗಳ ಸಂತತಿಯೂ ಹೆಚ್ಚಾಗಿರುವುದು ಗಮನಾರ್ಹ ವಿಷಯವಾಗಿದೆ.

ಗದಗ ತಾಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರಿನವರೆಗೆ ಕಪ್ಪತ್ತಗುಡ್ಡ ಚಾಚಿಕೊಂಡಿದೆ. ಶಿರಹಟ್ಟಿ ಸೇರಿ ಮೂರು ತಾಲೂಕುಗಳಲ್ಲಿ 65 ಕಿ.ಮೀಗಳಷ್ಟು ಉದ್ದಕ್ಕೆ ಕವಲು ಕವಲಾಗಿ ಸಣ್ಣ ಮತ್ತು ದೊಡ್ಡ ಗುಡ್ಡಗಳ ಸಾಲುಗಳಿಂದ ಹಚ್ಚ ಹಸಿರಿನಿಂದ ಕಂಗೊಳಿಸುವ ಕಪ್ಪತ್ತಗುಡ್ಡದ ಸೌಂದರ್ಯ ವರ್ಣನೆಗೂ ನಿಲುಕದ್ದು.

ಕಪ್ಪತ್ತಗುಡ್ಡದಲ್ಲಿರುವ ಸೂಜಿ ಮಡ್ಡಿ, ಕೆಂಪ ಗುಡ್ಡ, ಗಾಳಿಗುಂಡಿ ಬಸವಣ್ಣ, ಎತ್ತಿನ ಗುಡ್ಡ, ಅನೆ ಸೊಂಡಿಲು, ಉಪ್ಪಿನ ಪಡಿ, ಮಂಜಿನ ದೋಣಿ, ಮಜ್ಜಿಗೆ ಬಸವಣ್ಣ ಗುಡ್ಡ ಸೇರಿದಂತೆ ಇತರೆ ಗುಡ್ಡಗಳಲ್ಲಿ ಕತ್ತೆಕಿರುಬ, ತೋಳ, ಚಿರತೆ, ನರಿ, ಗುಳ್ಳೆನರಿ, ಸ್ಪಾಟೆಡ್ ಕ್ಯಾಟ್, ಪುನುಗು ಬೆಕ್ಕು, ಚುಕ್ಕೆ ಜಿಂಕೆ, ಕೃಷ್ಣಮೃಗ ಕೊಂಡುಕುರಿ, ಮುಳ್ಳುಹಂದಿ, ಕಾಡುಹಂದಿ ಕಂಡುಬಂದರೆ, ಔಷಧೀಯ ಪಂಚಲೋಹಗಳ ಗುಡ್ಡವಾಗಿರುವುದರಿಂದ ಇಲ್ಲಿ ಬೆಳೆಯುವ ವನಸ್ಪತಿಗಳು ನಾನಾ ರೋಗಗಳ ನಿವಾರಣೆಗೆ ಪರಿಣಾಮಕಾರಿಯಾಗಿವೆ.

ದೇಶದ ನಾನಾ ಮೂಲೆಗಳಿಂದ ನಾಟಿ ವೈದ್ಯರು, ಪಾರಂಪರಿಕ ವೈದ್ಯರು ಇಲ್ಲಿಗೆ ಆಗಮಿಸಿ ವನಸ್ಪತಿಗಳನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆ. ಕಪ್ಪತ್ತಗುಡ್ಡ ಅನೇಕ ದೇವಾಲಯಗಳು, ಮಠಗಳು, ಶ್ರದ್ಧಾ ಕೇಂದ್ರಗಳನ್ನು ಹೊಂದಿರುವ ಅಧ್ಯಾತ್ಮಿಕ ಕ್ಷೇತ್ರವೂ ಹೌದು. ಇಲ್ಲಿ ಪ್ರತಿದಿನ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಹಬ್ಬ ಹರಿದಿನಗಳು, ಹುಣ್ಣಿಮೆ, ಅಮಾವಾಸ್ಯೆ, ಜಾತ್ರೆ, ಉತ್ಸವ, ಆರಾಧನೆ ಸಮಯಗಳಲ್ಲಿ ಭಕ್ತ ಸಾಗರವೇ ಹರಿದು ಬರುವುದು ವಿಶೇಷವಾಗಿದೆ.

ಕಪ್ಪತ್ತಗುಡ್ಡ ಮೇಲ ತುದಿಯಲ್ಲಿ ನಮ್ಮ ಕಪ್ಪತ್ತಗುಡ್ಡ ಎನ್ನುವ ಲೋಗೊ, ಕಪ್ಪತ್ತಗುಡ್ಡಕ್ಕೆ ಹೋಗುವ ದಾರಿ ಫಲಕದಲ್ಲಿ ಕಪ್ಪತ್ತಗುಡ್ಡದಲ್ಲಿ ಇರುವ ಪ್ರಾಣಿಗಳ ಚಿತ್ರಣ, ಬಾಗೇವಾಡಿಯ ನರ್ಸರಿಯಲ್ಲಿ ಸಿಗುವ ಸಸಿಗಳು, ಕಪ್ಪತ್ತಗುಡ್ಡದಲ್ಲಿ ಪ್ಲಾಸ್ಟಿಕ್ ನಿಷೇಧ, ಪ್ಲಾಸ್ಟಿಕ್ ತಡೆಗಾಗಿ ಹಲವಾರು ಕ್ರಮಗಳ ಮೂಲಕ, ವಿವಿಧ ವಿನೂತನ ಮಾದರಿಯ ಫಲಕಗಳ ಅಳವಡಿಕೆಯ ಮೂಲಕ ಪರಿಸರದ ಕುರಿತು ಜನರಲ್ಲಿ ಅದರ ಮೌಲ್ಯವನ್ನು ತಿಳಿಸುವ ಕಾರ್ಯವನ್ನು ಅರಣ್ಯ ಇಲಾಖೆಯ ಆರ್‌ಎಫ್‌ಒ ಮಂಜುನಾಥ ಮೇಗಲಮನಿ ಮತ್ತು ಸಿಬ್ಬಂದಿ ವರ್ಗ ಮಾಡಿರುವುದು ಜನರಲ್ಲಿ ಪ್ರಶಂಸೆಗೆ ಕಾರಣವಾಗಿದೆ.

ಎಪ್ಪತ್ತಗಿರಿ ನೋಡುವುದಕ್ಕಿಂತ ಕಪ್ಪತ್ತಗಿರಿ ನೋಡುವುದು ಲೇಸು ಎಂಬ ಹಿರಿಯರ ಮಾತಿನಂತೆ ಕಪ್ಪತ್ತಗುಡ್ಡದ ನೈಸರ್ಗಿಕ ಸೌಂದರ್ಯ ಮನಸ್ಸಿಗೆ ತಂಪೆರೆಯುತ್ತದೆ. ಬೇಸಿಗೆಯಲ್ಲಿ ದಣಿವಾರಿಸಿಕೊಳ್ಳಲು, ಮಳೆಗಾಲದಲ್ಲಿ ವರ್ಷಧಾರೆಯ ಸೊಬಗು ಕಣ್ಣುಂಬಿಕೊಳ್ಳಲು, ಚಳಿಗಾಲದಲ್ಲಿ ಸೃಷ್ಟಿಯ ವಿಸ್ಮಯ ನೋಡಲು ಒಮ್ಮೆ ಬಂದರೆ ಮತ್ತೆ ಮತ್ತೆ ಬರಬೇಕೆನಿಸುವ ಸುಂದರ ತಾಣ ಇದಾಗಿದೆ.

ನಮ್ಮ ಉಸಿರಾಟದ ಗಾಳಿಯನ್ನು ಶುದ್ಧಗೊಳಿಸಲು ದೇವರು ನಿರ್ಮಿಸಿದ ಕಾರ್ಖಾನೆಯೇ ಅರಣ್ಯವಾಗಿದೆ. ನಾವು ಮುಂದಿನ ಪೀಳಿಗೆಗೆ ಬಳುವಳಿಯಾಗಿ ಆಮ್ಲಜನಕವನ್ನು ನೀಡಬೇಕಾದರೆ ನಾವೆಲ್ಲರೂ ಪರಿಸರ ಉಳಿಸುವ ಪಣತೊಡುವುದು ಅವಶ್ಯಕ. ಕಪ್ಪತ್ತಗುಡ್ಡಕ್ಕೆ ದೇಶ-ವಿದೇಶದ ಪ್ರವಾಸಿಗರು ದಿನ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಪರಿಸರಪ್ರಿಯರಿಗೆ ಸಂತಸ ಮೂಡಿಸಿದೆ.

– ಮಂಜುನಾಥ ಮೇಗಲಮನಿ.

ಆರ್‌ಎಫ್‌ಓ, ಮುಂಡರಗಿ.

“ಕಪ್ಪತ್ತಗುಡ್ಡ ನಿರ್ಮಲ ಪರಿಸರದ ತಾಯಿಬೇರು. ಅದು ಉಳಿದರೆ ಪರಿಸರ ವೃಕ್ಷ ಉಳಿದೀತು. ಇಲ್ಲದೆ ಹೋದರೆ ಮುಂದಿನ ಜನಾಂಗದ ಭವಿಷ್ಯ ಅಳಿದು ಹೋದೀತು. ಪ್ರತಿಯೊಬ್ಬರೂ ಎಚ್ಚರಗೊಳ್ಳಿ. ಆಧುನಿಕ ಜಗತ್ತಿನ ಮನುಷ್ಯ ಕೆಲ ಆಮಿಷಗಳಿಗೆ ಕಟ್ಟುಬಿದ್ದು ಪ್ರಕೃತಿಯ ಉಳಿಸುವ ಬದಲು ಅಳಿವಿನಂಚಿಗೆ ಒಯ್ಯುತ್ತಿದ್ದಾನೆ. ನಾವೆಲ್ಲರೂ ಎಚ್ಚೆತ್ತು ಪರಿಸರಕ್ಕೆ ಆದ್ಯತೆ ನೀಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಕಾರ್ಯ ಪ್ರಶಂಸನೀಯ”

– ಡಾ. ಜ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು

ಡಂಬಳ- ಗದಗ ಸಂಸ್ಥಾನಮಠ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!