ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಳೆದ 1 ತಿಂಗಳಿಂದಲೂ ಯೂರಿಯಾ ಗೊಬ್ಬರಕ್ಕಾಗಿ ರೈತರು ಸರದಿ ಸಾಲಿನಲ್ಲಿ ನಿಂತು ನೂಕು-ನುಗ್ಗಾಟದೊಂದಿಗೆ ಪೊಲೀಸರ ಕಾವಲಿನಲ್ಲಿ ಒಬ್ಬರಿಗೆ 1 ಚೀಲದಂತೆ ಗೊಬ್ಬರ ಪಡೆಯುವ ಪರಿಸ್ಥಿತಿ ತಪ್ಪದಂತಾಗಿದೆ.
ಮುಂಗಾರಿನ ಸಕಾಲಿಕ ಮಳೆಯಿಂದ ಬಿತ್ತನೆ ಮಾಡಿದ ಬೆಳೆಗಳು ಸಮೃದ್ಧವಾಗಿ ಬೆಳೆದು ಈಗ ಫಲ ಬಿಡುವ ಹಂತದಲ್ಲಿವೆ. ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಬೆಳೆಗೆ ಯೂರಿಯಾ ಹಾಕಲು ಮತ್ತೆ ಯೂರಿಯಾಕ್ಕಾಗಿ ಅಲೆದಾಡುತ್ತಿದ್ದಾರೆ. ಯೂರಿಯಾ ಬರುವುದನ್ನೇ ಕಾಯುತ್ತಿರುವ ರೈತರು ಗುರುವಾರ ಪಟ್ಟಣದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಗೊಬ್ಬರ ಬಂದಿರುವ ಸುದ್ದಿ ತಿಳಿದು ಏಕಕಾಲಕ್ಕೆ ಜಮಾಯಿಸಿದ್ದರು.
ನೂಕುನುಗ್ಗಲು ಉಂಟಾಗಿ, ರೈತರು ಪರಸ್ಪರ ವಾಗ್ವಾದಕ್ಕಿಳಿದ ಘಟನೆಗಳು ನಡೆದವು. ವಿಷಯ ತಿಳಿದ ಪೊಲೀಸರು ಆಗಮಿಸಿ ರೈತರನ್ನು ಸಾಲಿನಲ್ಲಿ ನಿಲ್ಲಿಸಿದರು. 500 ಚೀಲ ಯೂರಿಯಾ ಬಂದಿದ್ದರಿಂದ ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ 1 ಆಧಾರ್ ಕಾರ್ಡ್ಗೆ 1 ಚೀಲ ಯೂರಿಯಾ ಕೊಡಬೇಕು ಎಂದು ಕೃಷಿ ಇಲಾಖೆ ಮತ್ತು ಪೊಲೀಸರು ಸೂಚಿಸಿದರು. ರೈತರು ತಮ್ಮ ಮಕ್ಕಳು ಸೇರಿ ಕುಟುಂಬದ ಸದ್ಯಸರೊಡಗೂಡಿ ಆಧಾರ್ ಕಾರ್ಡ್ ಹಿಡಿದು ಸರದಿ ಸಾಲಿನಲ್ಲಿ ನಿಂತು ಯೂರಿಯಾ ಪಡೆದು ಹೋದರು. ಸರದಿಯಲ್ಲಿ ನಿಂತಿದ್ದ ಅರ್ಧಕ್ಕಿಂತ ಹೆಚ್ಚು ರೈತರು ಬರಿಗೈಲಿ ವಾಪಸ್ಸಾದರು.
ಗದಗ ಜಿಲ್ಲೆಗೆ ಗೊಬ್ಬರ ಪೂರೈಕೆಯಲ್ಲಿ ಪ್ರತಿಬಾರಿ ಮಲತಾಯಿ ಧೋರಣೆ ಎದ್ದು ಕಾಣುತ್ತಿದೆ. ಜಿಲ್ಲೆಗೆ ಅವಶ್ಯವಿರುವಷ್ಟು ಗೊಬ್ಬರವನ್ನು ಕಂಪನಿಯವರು ಪೂರೈಕೆ ಮಾಡುತ್ತಿಲ್ಲ. ಈ ನಡುವೆ ಯೂರಿಯಾ ಅವಶ್ಯಕತೆ ಇಲ್ಲದ ಕೆಲವರು ಪ್ರತಿಬಾರಿ ಯೂರಿಯಾ ಬಂದಾಗ ಸರದಿಯಲ್ಲಿ ನಿಂತು ಯೂರಿಯಾ ಗೊಬ್ಬರ ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.