HomeGadag Newsನೆರೆ ರಾಜ್ಯದ ಪ್ರವಾಸಿಗರ ಪರದಾಟ

ನೆರೆ ರಾಜ್ಯದ ಪ್ರವಾಸಿಗರ ಪರದಾಟ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಟೂರಿಸ್ಟ್ ಬಸ್ ಒಂದರ ಚಾಸ್ಸಿ, ಇಂಜಿನ್ ಸಂಖ್ಯೆ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮೂಲದ ಖಾಸಗಿ ಬಸ್ ಒಂದನ್ನು ಗದಗ ಆರ್‌ಟಿಓ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮಾಡಿದ್ದಾರಲ್ಲ, ಇದರಲ್ಲೇನು ವಿಶೇಷವಿದೆ ಎಂಬ ಅನುಮಾನ ಮೂಡುವುದು ಸಹಜ. ಆದರೆ, ಈ ಪ್ರಕರಣದಿಂದಾಗಿ, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 49 ಪ್ರಯಾಣಿಕರು ಆರ್‌ಟಿಓ ಕಚೇರಿ ಆವರಣದಲ್ಲಿಯೇ ರಾತ್ರಿ ಕಳೆಯುವಂತಾಗಿದ್ದು ಮಾತ್ರ ಶೋಚನೀಯ.

ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಪುಲಿವೆಂದುಲಾ ಮೂಲದ 49 ಜನರು ಅಲ್ಲಿನ ಖಾಸಗಿ ಬಸ್ ಒಂದನ್ನು ಬಾಡಿಗೆಗೆ ಪಡೆದು ಆಂಧ್ರ, ಕರ್ನಾಟಕ, ಗೋವಾ ಪ್ರವಾಸಕ್ಕೆ ತೆರಳುತ್ತಿದ್ದರು. ವೆಂಕಟಲಕ್ಷ್ಮಿನಾಯಾರಣ ಎಂಬುವವರ AP03-TE8520 ಸಂಖ್ಯೆಯ ಬಸ್ ಬುಕ್ ಮಾಡಲಾಗಿತ್ತು. ಒಟ್ಟು 1 ಲಕ್ಷ 70 ಸಾವಿರ ರೂ ಬಾಡಿಗೆ ಹಣಕ್ಕೆ ಪ್ರವಾಸ ಮಾಡಿಸುವುದಾಗಿ ಬಸ್ ಮಾಲೀಕರು ಒಪ್ಪಿಕೊಂಡಿದ್ದರು. ಮುಂಗಡ 70 ಸಾವಿರ ರೂ ಪಡೆದು, ಹೈದ್ರಾಬಾದ್ ಪ್ರವಾಸ ಮಾಡಿಸಿ ಕರ್ನಾಟಕ ಮಾರ್ಗವಾಗಿ ಗೋವಾಕ್ಕೆ ತೆರಳುತ್ತಿದ್ದರು.

ಮಂಗಳವಾರ ಗದಗ ನಗರಕ್ಕೆ ಪ್ರವೇಶಿಸುತ್ತಿದ್ದಂತೆ, ಆರ್‌ಟಿಓ ಅಧಿಕಾರಿಗಳು ಹೊರ ರಾಜ್ಯದ ರಿಜಿಸ್ಟ್ರೇಷನ್ ಇರುವ ಸದರಿ ಬಸ್ ತಡೆದು, ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದರು.

ತಪಾಸಣೆಯ ಸಂದರ್ಭದಲ್ಲಿ ವಾಹನದ ಚಾಸ್ಸಿ ನಂಬರ್‌ನ್ನು ಕಾನೂನು ಬಾಹಿರವಾಗಿ ತಿರುಚಿರುವುದು ಗೊತ್ತಾಗಿದೆ. ಅಲ್ಲಿಂದ ಆರ್‌ಟಿಓ ಕಚೇರಿಗೆ ಬಸ್ ಕರೆಸಿ, ಇಂಜಿನ್ ನಂಬರ್ ಪರಿಶೀಲಿಸಲಾಗಿದೆ. ಇಂಜಿನ್ ನಂಬರ್ ಕೂಡ ತಿರುಚಿರುವುದು ಕೂಡ ಬೆಳಕಿಗೆ ಬಂದಿದೆ. ಅನುಮಾನಗೊಂಡ ಅಧಿಕಾರಿಗಳು ಬಸ್ ಸೀಜ್ ಮಾಡಿಕೊಂಡಿದ್ದಾರೆ.

The influx of tourists from the neighboring state

ಬಸ್ ಸೀಜ್ ಮಾಡಿರುವ ಅಧಿಕಾರಿಗಳು, ಬಸ್ ಸೇಫ್ಟಿ ಹಿನ್ನೆಲೆಯಲ್ಲಿ ಸಂಚಾರ ಮಾಡಲು ಯೋಗ್ಯವಾಗಿಲ್ಲ.

ಚಾಸ್ಸಿ ನಂಬರ್ ಬದಲಾಯಿಸಿರುವುದೂ ಗಮನಕ್ಕೆ ಬಂದಿದ್ದು, ಒಂದೇ ಸಂಖ್ಯೆಯ ಎರಡು ಬಸ್‌ಗಳು ಸಂಚರಿಸುತ್ತಿರುವ ಸಾಧ್ಯತೆಗಳಿವೆ. ಹೀಗಾಗಿ, ಈ ಬಗ್ಗೆ ಪರಿಶೀಲನೆ ಮಾಡಿ, ಕರ್ನಾಟಕ ಮೋಟಾರ್ ವೈಹಿಕಲ್ ಟ್ಯಾಕ್ಸೇಷನ್ ಕಾಯ್ದೆ ಅಡಿ ಬಸ್ ಸೀಜ್ ಮಾಡಲಾಗಿದೆ ಎಂದು ಆರ್‌ಟಿಓ ಅಧಿಕಾರಿ ಲಕ್ಷ್ಮಿಕಾಂತ ಮಾಹಿತಿ ನೀಡಿದ್ದಾರೆ.

ಈ ಘಟನೆಯಿಂದ ಪೇಚಿಗೆ ಸಿಲುಕಿರುವ ಬಸ್‌ನಲ್ಲಿದ್ದ ಪ್ರವಾಸಿಗರು, ಇಲ್ಲಿನ ಭಾಷೆಯೂ ಬರದೇ ಮುಂದೇನು ಎಂದು ಕಂಗಾಲಾಗಿದ್ದಾರೆ. ಇವರ ಕಷ್ಟವನ್ನರಿತ ಅಧಿಕಾರಿಗಳು, ಅವರ ಊರಿಗೆ ಹಿಂದಿರುಗಲು ಪರ್ಯಾಯ ವ್ಯವಸ್ಥೆ ಮಾಡಿಕೊಡಲು ಮುಂದಾಗಿದ್ದರು. ಆದರೆ, ಈಗಾಗಲೇ ಬಸ್‌ನ ಬಾಡಿಗೆ ಶುಲ್ಕ ಪಾವತಿಸಿರುವುದರಿಂದ, ಪುನಃ ಬೇರೆ ವಾಹನಕ್ಕೆ ಹಣ ನೀಡಲು ಒಪ್ಪುತ್ತಿಲ್ಲ ಎನ್ನಲಾಗಿದೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು, ಮಕ್ಕಳು ಆರ್‌ಟಿಓ ಕಚೇರಿ ಅಂಗಳದಲ್ಲೇ ಅಡುಗೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ, ಅಲ್ಲಿಯೇ ಉಂಡು, ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ, ತಮ್ಮದಲ್ಲದ ತಪ್ಪಿಗೆ ಅಮಾಯಕ ಪ್ರವಾಸಿಗರು ಪರದಾಡುತ್ತಿರುವುದು ನಗರದಲ್ಲಿ ಹಲವು ವಿಧದ ಚರ್ಚೆಗೆ ಕಾರಣವಾಗಿದೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!