ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಅ.12ರಂದು ವಿಜಯದಶಮಿಯ ದಿವಸ ಎರಡು ಗುಂಪಿನ ನಡುವೆ ನಡೆದ ಸಣ್ಣ ಘಟನೆಯ ಕಾರಣವನ್ನಿಟ್ಟುಕೊಂಡು ದುರುದ್ದೇಶದಿಂದ ಶ್ರೀರಾಮಸೇನೆ ಹಲವರೊಡಗೂಡಿ ಅ.19ರಂದು ಲಕ್ಷೇಶ್ವರ ಬಂದ್‌ಗೆ ಕರೆ ನೀಡಿದೆ. ಈ ಬಂದ್‌ನ್ನು ಹಿಂಪಡೆಯಬೇಕು ಎಂದು ಸಂಘಟನೆಗಳ ಮುಖಂಡರುಗಳಾದ ಸುರೇಶ ನಂದೆಣ್ಣವರ, ಕೋಟೆಪ್ಪ ವರ್ದಿ ಸೇರಿದಂತೆ ಅನೇಕರು ಎಚ್ಚರಿಸಿದ್ದಾರೆ.
ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಂದ್ ಕರೆ ವಿರೋಧಿಸಿ ಮಾತನಾಡಿದ ಅವರು, ವಿಜಯದಶಮಿಯ ದಿನ ದುರ್ಗಾದೇವಿಯ ಮೆರವಣಿಗೆಯ ನಂತರ ಎರಡು ಕೋಮುಗಳ ನಡುವೆ ನಡೆದ ಸಣ್ಣ ಘಟನೆಯನ್ನೇ ದೊಡ್ಡದಾಗಿಸಿ ಸಮಾಜದ ಶಾಂತಿ ಹದಗೆಡಿಸುವ ಕಾರ್ಯ ಮಾಡುತ್ತಿರುವುದು ಸರಿಯಲ್ಲ.
ಘಟನೆಯ ಬಳಿಕ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಕೈಗೊಂಡ ಕ್ರಮವೇ ತಪ್ಪು ಎಂದು ಹೇಳುವುದು ಸೂಕ್ತವಲ್ಲ. ಆದಾಗ್ಯೂ ತಪ್ಪಾಗಿದ್ದರೆ ಅಂದಿನ ಘಟನೆಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವದಕ್ಕೆ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿ, ಹಿರಿಯರೊಂದಿಗೆ ಚರ್ಚಿಸಿ ಮತ್ತು ಸಂಬಂಧಪಟ್ಟ ಇಲಾಖೆಯೊಂದಿಗೆ ಕಾನೂನಾತ್ಮಕ ಹೋರಾಟ ಮಾಡಬೇಕು.
ಬದಲಾಗಿ, ಒಂದು ಸಣ್ಣ ವಿಷಯಕ್ಕೆ ಲಕ್ಷ್ಮೇಶ್ವರ ಬಂದ್‌ಗೆ ಕರೆ ನೀಡುವುದರಿಂದ ರೈತರು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ಸೇರಿದಂತೆ ಇಡೀ ಜನಜೀವನ ಅಸ್ತವ್ಯಸ್ತವಾಗುತ್ತದೆ. ಪೊಲೀಸ್ ಅಧಿಕಾರಿಯ ಮೇಲೆ ವಯಕ್ತಿಕ ಹಗೆ ಸಾಧನೆ ಮತ್ತು ಸುಳ್ಳು ಆರೋಪ ಮಾಡುವುದು ಬೇಡ. ಈ ಸಂಘಟನೆಗಳ ಮುಖಂಡರು ಮಾಡುವ ಅನಧಿಕೃತ ದಂಧೆಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಇಸ್ಪೀಟ್ ಆಡುವ ವಿವಾದಾತ್ಮಕ ಹೇಳಿಕೆ ನೀಡಿರುವ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಈ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸೋಮಣ್ಣ ಬೆಟಗೇರಿ, ಫಕ್ಕಿರೇಶ ಮ್ಯಾಟಣ್ಣವರ, ಪದ್ಮರಾಜ ಪಾಟೀಲ, ರಾಮಣ್ಣ ಲಮಾಣಿ(ಶಿಗ್ಲಿ), ತಿಪ್ಪಣ್ಣ ಸಂಶಿ, ಶರಣು ಗೊಡಿ, ಇಸ್ಮಾಯಿಲ್ ಅಡೂರ, ಸಂಗಯ್ಯ ಸಾಲಾವಳಿಮಠ, ಯಲ್ಲಪ್ಪ ತಳವಾರ, ನಾಗರಾಜ ಮಡಿವಾಳರ, ಸುರೇಶ ಹಟ್ಟಿ, ಮಂಜಣ್ಣ ಶೆರಸೂರಿ, ನೀಲಪ್ಪ ಪಡಗೇರಿ, ಯಲ್ಲಪ್ಪ ಸೂರಣಗಿ ನೀಲಪ್ಪ ಶರಸೂರಿ, ಸುರೇಶ ಹಟ್ಟಿ, ಸದಾನಂದ ನಂದೆಣ್ಣವರ, ಅಣ್ಣಪ್ಪ ರಾಮಗೇರಿ, ಬಸವರಡ್ಡಿ ಹನುಮರಡ್ಡಿ, ರಾಜು ಓಲೇಕಾರ, ನಾಗೇಶ ಅಮರಾಪುರ, ಹೊನ್ನಪ್ಪ ಒಡ್ಡರ ಸೇರಿದಮತೆ ಅನೇಕರಿದ್ದರು.
ಬಂದ್‌ನ ಮುಂದಾಳತ್ವ ವಹಿಸಲಿರುವ ಶ್ರೀರಾಮ ಸೇನೆಯ ಮುಖಂಡರಿಗೆ ಪೊಲೀಸರು ಲಕ್ಷ್ಮೇಶ್ವರಕ್ಕೆ ಬರದಂತೆ ತಡೆಯಬೇಕು. ಇಲ್ಲವಾದಲ್ಲಿ ನಾವೇ ತಡೆಯುತ್ತೇವೆ. ಒಂದು ವೇಳೆ ಬಂದ್ ನಿರ್ಧಾರ ಕೈ ಬಿಡದಿದ್ದರೆ ಪ್ರತಿಯಾಗಿ ಅಂದೇ ಪಕ್ಷಾತೀತ, ಜ್ಯಾತ್ಯಾತೀತ ಸಂಘಟನೆಗಳೊಡಗೂಡಿ ದೊಡ್ಡಮಟ್ಟದ ಹೋರಾಟಕ್ಕಿಳಿದು ಬಂದ್ ಕರೆ ವಿಫಲವಾಗಿಸಲು ನಾವು ಸಿದ್ದರಾಗಿದ್ದೇವೆ ಎಂದರು.