ವಿಜಯಸಾಕ್ಷಿ ಸುದ್ದಿ, ರೋಣ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪಲಿತಾಂಶ ಸುಧಾರಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪಾಲಕರಿಗೂ ಸಹ ತಿಳುವಳಿಕೆ ನೀಡಿ ಮಕ್ಕಳ ಓದಿನ ಬಗ್ಗೆ ಗಮನಹರಿಸುವಂತೆ ಸೂಚಿಸಬೇಕು ಎಂದು ತಾ.ಪಂ ಆಡಳಿತಾಧಿಕಾರಿ ಮಹೇಶ ಪೋತದಾರ ಬಿಇಒ ರುದ್ರಪ್ಪ ಹುರುಳಿಯವರಿಗೆ ಸೂಚಿಸಿದರು.
ಅವರು ಬುಧವಾರ ತಾಪಂ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಇಒ ರುದ್ರಪ್ಪ ಹುರುಳಿ ಮಾತನಾಡಿ, ಪಲಿತಾಂಶ ಸುಧಾರಣೆಗೆ ನಮ್ಮ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ ಹೆಚ್ಚುವರಿ ಸಮಯ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ. ಮುಖ್ಯವಾಗಿ ಓದಿನಲ್ಲಿ ಹಿಂದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಅನುಕೂಲತೆಯನ್ನು ಕಲ್ಪಿಸುತ್ತಿದ್ದಾರೆ. ಪರೀಕ್ಷೆಯ ಸಂದರ್ಭದಲ್ಲಿ ತನಿಖಾಧಿಕಾರಿಗಳ ತಂಡ ಆಗಮಿಸುತ್ತದೆ. ಇದರಿಂದ ಗಾಬರಿಗೊಳ್ಳುವ ವಿದ್ಯಾರ್ಥಿಗಳು ಸರಿಯಾಗಿ ಪರೀಕ್ಷೆ ಬರೆಯುವುದಿಲ್ಲ. ಇದೂ ಕೂಡ ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ ಎಂಬ ಅಚ್ಚರಿಯ ಹೇಳಿಕೆಯನ್ನು ನೀಡಿದ್ದು ಗಲಿಬಿಲಿಗೆ ಕಾರಣವಾಯಿತು.
ಆರೋಗ್ಯ ಇಲಾಖೆಯ ಡಾ. ಬಿ.ಎಸ್. ಭಜಂತ್ರಿ ಮಾತನಾಡಿ, ಗಜೇಂದ್ರಗಡ ತಾಲೂಕಿನ ಇಟಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ಹುಚ್ಚು ಹಿಡಿದ ಶ್ವಾನವೊಂದು ಒಂದೇ ದಿನ 25 ಜನಕ್ಕೆ ಕಚ್ಚಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದ ಅವರು, ಚುಚ್ಚು ಮದ್ದಿಗೆ ಕೊರತೆಯಿಲ್ಲ ಎಂದರು.
ಇಒ ಚಂದ್ರಶೇಖರ ಕಂದಕೂರ ಮಾತನಾಡಿ, ಅಂಗನವಾಡಿ, ಶಾಲೆ, ವಸತಿ ನಿಲಯಗಳಿಗೆ ತೆರಳಿ ಮಕ್ಕಳ ಹಾಗೂ ವಿದ್ಯಾರ್ಥಿಗಳ ಆರೋಗ್ಯವನ್ನು ಸಕಾಲಕ್ಕೆ ಪರೀಕ್ಷಿಸಬೇಕು ಎಂದರಲ್ಲದೆ,
ತಾಲೂಕಿನಲ್ಲಿ ಮಾದರಿ ಅಂಗನವಾಡಿ ಕೇಂದ್ರಗಳನ್ನು ರೂಪಿಸಲು ಮತ್ತು ನಿರ್ಮಿಸಲು ಕ್ರೀಯಾಯೋಜನೆಯನ್ನು ರೂಪಿಸಬೇಕು ಎಂದು ತಾ.ಪಂ ಸಿಡಿಪಿ ಪಂಚಾಕ್ಷರಯ್ಯ ಹಿರೇಮಠರವರಿಗೆ ಸೂಚಿಸಿದರು.
ಇದಕ್ಕೆ ಪಂಚಾಕ್ಷರಯ್ಯ ಹಿರೇಮಠ ಪ್ರತಿಕ್ರಿಯಿಸಿ, ಬಯಲು ಹೊಂದಿರುವ ಅಂಗನವಾಡಿ ಕೇಂದ್ರಗಳ ಪಟ್ಟಿಗಳನ್ನು ತಯಾರಿಸಿದರೆ ಅವುಗಳಿಗೆ ಕಂಪೌಂಡ್ ಜೊತೆಗೆ ಸುಂದರ ಉದ್ಯಾನವನ ನಿರ್ಮಿಸಲು ಅನುಕೂಲವಾಗುತ್ತದೆ ಎಂದರು.
ನಂತರ ವಿವಿಧ ಇಲಾಖೆಗಳ ಪ್ರಗತಿ ವರದಿಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ತಾ.ಪಂ ಯೋಜನಾಧಿಕಾರಿ ಎಸ್.ಎಸ್. ನೀಲಗುಂದ ಉಪಸ್ಥಿತರಿದ್ದರು.
ಈ ಬಾರಿ 14 ಪರೀಕ್ಷಾ ಕೇಂದ್ರಗಳಲ್ಲಿ 3919 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆಯಲಿದ್ದಾರೆ. ಕಳೇದ ಬಾರಿ ಶೇ.81ರಷ್ಟು ಫಲಿತಾಂಶವನ್ನು ಹೊಂದಲಾಗಿತ್ತು. ಈ ಬಾರಿ ಶೇ.85ರಷ್ಟು ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಇಒ ರುದ್ರಪ್ಪ ಹುರುಳಿ ತಿಳಿಸಿದರು.
ವಸತಿ ನಿಲಯಗಳಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳು ಸಹ ಉತ್ತಮ ಪ್ರಗತಿ ಸಾಧಿಸಬೇಕು. ಶೇ.85 ಪ್ರಗತಿಗೆ ಬದಲಾಗಿ ಶೇ.100ರಷ್ಟು ಫಲಿತಾಂಶ ಸಾಧಿಸುವ ಗುರಿಯನ್ನು ಹೊಂದಬೇಕು.
– ಚಂದ್ರೇಶೇಖರ ಕಂದಕೂರ.
ಇಒ, ರೋಣ.