ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪ್ರಸ್ತುತ ದಿನಮಾನಗಳಲ್ಲಿ ಕನ್ನಡದ ಸ್ಥಿತಿ ಪಟ್ಟಣ, ನಗರ, ಮಹಾನಗರಗಳಲ್ಲಿ ಮಾತ್ರವಲ್ಲದೆ ಉದ್ಯೋಗ ಕ್ಷೇತ್ರದಲ್ಲಿಯೂ ದುರ್ಬಲವಾಗಿದೆ. ಇಂಗ್ಲಿಷ್ ಮಾಧ್ಯಮದ ಅಬ್ಬರ, ಪೋಷಕರ ಒತ್ತಡ ಮತ್ತು ಪಠ್ಯಕ್ರಮದ ಬದಲಾವಣೆಯ ನಡುವೆ ಕನ್ನಡ ವಿಷಯ ಕೇವಲ ಒಂದು ಪೇಪರ್ ಆಗಿ ಉಳಿದಿದೆ. ವಿದ್ಯಾರ್ಥಿಗಳು ಕನ್ನಡ ಓದಿದರೂ ಕನ್ನಡದಲ್ಲಿ ಮಾತನಾಡುವುದಿಲ್ಲ. ಆದರೆ, ಇಲ್ಲೊಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜ್ಯದಾದ್ಯಂತ ಗಮನ ಸೆಳೆದಿದೆ. ಇಲ್ಲಿ ಪ್ರತಿದಿನ ಕನ್ನಡ ರಾಜ್ಯೋತ್ಸವದಂತೆಯೇ ಉತ್ಸವದ ವಾತಾವರಣ ತುಂಬಿರುತ್ತದೆ.
ಇದು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ. 1ರ ಕೋಚಲಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಇಲ್ಲಿ ಕನ್ನಡ ಭಾಷೆಯ ಸೊಗಸು ಮತ್ತು ಸಾಹಿತ್ಯದ ವೈಭವವನ್ನು ಹೊಸ ತಲೆಮಾರಿಗೆ ಪರಿಚಯಿಸಲು ಆರಂಭವಾದ ಕನ್ನಡ ಭಾಷಾ ಪ್ರಯೋಗ ಈಗ ಎಲ್ಲರ ಕಣ್ಣು, ಮನ ಸೆಳೆಯುತ್ತಿದೆ. ಈ ಪ್ರಯೋಗ ಶಾಲೆಯ ಹೃದಯಭಾಗದಲ್ಲಿ ನಿಂತಿದ್ದಾರೆ ಶಿಕ್ಷಕ ವಿಜಯಕುಮಾರ ಡಿ.ಆರ್.
ಕನ್ನಡದ ಮೇಲಿನ ಅಭಿಮಾನದಿಂದ ಅವರ ಕನಸೆಂದರೆ — ಕನ್ನಡ ಕಲಿಯಬೇಕು, ಕನ್ನಡ ಮಾತನಾಡಬೇಕು, ಕನ್ನಡದಲ್ಲಿ ಯೋಚಿಸಬೇಕು. ಮಕ್ಕಳಲ್ಲಿ ಭಾಷಾ ಪ್ರೀತಿ ಬೆಳೆಸಲು ಅವರು ರೂಪಿಸಿರುವ ಪ್ರಯೋಗಗಳು, ಚಟುವಟಿಕೆಗಳು ಮತ್ತು ಪಾಠ ವಿಧಾನಗಳು ವಿಶಿಷ್ಟವಾಗಿವೆ.
ಭಾಷಾ ಪ್ರಯೋಗ ಶಾಲೆಯ ಗೋಡೆಗಳು ಚಿತ್ರಗಳು, ನುಡಿಗಟ್ಟುಗಳು, ಕಾವ್ಯ ಪದ್ಯಗಳು ಮತ್ತು ಕನ್ನಡದ ಚಿಂತಕರ ನುಡಿಮುತ್ತುಗಳಿಂದ ಅಲಂಕರಿಸಲ್ಪಟ್ಟಿವೆ. ಇಲ್ಲಿ ಪದಗಳು ಕೇವಲ ಶಬ್ದವಲ್ಲ — ಸಂಸ್ಕೃತಿಯ ನಾಡಿಯಂತಿವೆ. ಮಕ್ಕಳು ಇಲ್ಲಿ ಕಲಿಯುವುದಿಲ್ಲ, ಅವರು ಕನ್ನಡದ ಅಕ್ಷರಗಳ ಜೊತೆ ಬದುಕುತ್ತಾರೆ. ಕನ್ನಡ ಪ್ರಯೋಗ ಶಾಲೆ ಕೇವಲ ಶಿಕ್ಷಣದ ಕೇಂದ್ರವಲ್ಲ, ಅದು ನಾಡು-ನುಡಿ ಮತ್ತು ನಾಳೆಯ ಕನಸನ್ನು ಕಟ್ಟುತ್ತಿರುವ ಹೊಸ ಚಳವಳಿ.
ಸರ್ಕಾರದ ಕನ್ನಡ ಪ್ರೋತ್ಸಾಹ ಕಾರ್ಯಕ್ರಮಗಳು ಸಾಮಾನ್ಯವಾಗಿ ರಾಜ್ಯೋತ್ಸವದ ದಿನಕ್ಕೆ ಮಾತ್ರ ಸೀಮಿತವಾಗುತ್ತವೆ. ಆದರೆ ವಿಜಯಕುಮಾರರಂತಹ ಶಿಕ್ಷಕರು ತಮ್ಮ ಮಟ್ಟಿಗೆ ಕನ್ನಡಕ್ಕೆ ಜೀವ ತುಂಬುತ್ತಿದ್ದಾರೆ. ಸರ್ಕಾರ ಇಂತಹ ಪ್ರಯೋಗ ಶಾಲೆಗಳನ್ನು ಮಾದರಿಯಾಗಿ ಪರಿಗಣಿಸಿ, ರಾಜ್ಯದಾದ್ಯಂತ ಇಂತಹ ಪಾಠಮನೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಬೇಕಾಗಿದೆ.
ಶಾಲೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಚಿತ್ರಗಳು ಮತ್ತು ಅವರ ಪುಸ್ತಕ ಸಂಗ್ರಹವೂ ವಿಶೇಷ ಆಕರ್ಷಣೆಯಾಗಿದೆ. ಕುವೆಂಪು, ಬೇಂದ್ರೆ, ಗಿರೀಶ ಕಾರ್ನಾಡ್, ಚಂದ್ರಶೇಖರ ಕಂಬಾರ, ಯು.ಆರ್. ಅನಂತಮೂರ್ತಿ ಮುಂತಾದ ಪ್ರಖ್ಯಾತ ಸಾಹಿತಿಗಳ ಪುಸ್ತಕಗಳು ಶಾಲೆಯ ಕನ್ನಡ ಗ್ರಂಥಾಲಯ ವಿಭಾಗದಲ್ಲಿ ಸಂಗ್ರಹವಾಗಿವೆ.
“ಕನ್ನಡ ಕಲಿಯುವುದು ಕೇವಲ ಪಾಠವಲ್ಲ, ಅದು ಬದುಕಿನ ಪಾಠ.”
ಈ ವಿಶಿಷ್ಟ ಪ್ರಯೋಗ ಶಾಲೆಯ ಹೃದಯ ಶಿಕ್ಷಕ ವಿಜಯಕುಮಾರ ಡಿ.ಆರ್. ಅವರ ವೈಯಕ್ತಿಕ ಆಸಕ್ತಿ, ಶ್ರಮ ಮತ್ತು ಕನ್ನಡದ ಮೇಲಿನ ಅಪ್ರಮೇಯ ಅಭಿಮಾನದಿಂದ ಈ ಶಾಲೆಯನ್ನು ಸಂಪೂರ್ಣವಾಗಿ ಕನ್ನಡದ ವಾತಾವರಣಕ್ಕೆ ತಂದಿದ್ದಾರೆ.
ವ್ಯಾಕರಣ ಚಾರ್ಟ್‌ಗಳು, ಪದ್ಯಮಾಲೆಗಳು, ನುಡಿಗಟ್ಟು ಪಟಗಳು, ಭಾಷಾ ಆಟಗಳು, ಕವಿತೆಗಳ ಹೂಗುಚ್ಛಗಳು, ಹಿರಿಯ ಕನ್ನಡ ಚಿಂತಕರ ಉಲ್ಲೇಖಗಳು ಎಲ್ಲವೂ ಮಕ್ಕಳಲ್ಲಿ ಕನ್ನಡದ ಆಸಕ್ತಿ ಹುಟ್ಟಿಸುತ್ತಿವೆ.
– ಆರ್.ಎಸ್. ಬುರಡಿ, ಉಪ ನಿರ್ದೇಶಕರು, ಶಿಕ್ಷಣ ಇಲಾಖೆ
“ಪ್ರತಿ ಮಗುವೂ ಇಂಗ್ಲಿಷ್ ಕಲಿಯಲಿ, ಆದರೆ ಕನ್ನಡ ಬಿಟ್ಟು ಹೋಗಬಾರದು.”
ಈ ಮಾತು ಮಕ್ಕಳು, ಪೋಷಕರು ಮತ್ತು ಗ್ರಾಮಸ್ಥರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಇಂತಹ ಪ್ರಯತ್ನಗಳು ಮುಂದುವರಿಯಲು ಸರ್ಕಾರದ ಪ್ರೋತ್ಸಾಹ ಅಗತ್ಯ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಇಂತಹ ಪ್ರಯೋಗ ಶಾಲೆಗಳಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಿದರೆ, ರಾಜ್ಯದ ಪ್ರತಿಯೊಂದು ಹಳ್ಳಿಯಲ್ಲಿಯೂ ಕನ್ನಡದ ಮಂದಿರಗಳು ಮೂಡಬಹುದು. ಈ ಪ್ರಯೋಗ ಶಾಲೆ ನಿರ್ಮಾಣಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ಎಸ್.ಬಿ. ಕೊಟ್ರಶೆಟ್ಟಿ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ.
– ವಿಜಯಕುಮಾರ ಡಿ.ಆರ್., ಶಿಕ್ಷಕ, ಸ.ಹಿ.ಪ್ರಾ ಶಾಲೆ, ಕೋಚಲಾಪೂರ
“ಕನ್ನಡದ ನುಡಿ, ನುಡಿಗಟ್ಟು, ಜನಪದ ಗೀತೆ ಮತ್ತು ಕಥೆಗಳು ನಾಶವಾಗುತ್ತಿರುವ ಸಂದರ್ಭದಲ್ಲಿ ಈ ಪ್ರಯೋಗ ಶಾಲೆ ಆಶಾಕಿರಣವಾಗಿದೆ.” ಮಕ್ಕಳು ತಮ್ಮ ಭಾಷೆಯ ಗೌರವವನ್ನು ಅರಿತು ಕನ್ನಡದಲ್ಲಿ ನವೋತ್ಸಾಹದಿಂದ ಮಾತನಾಡುತ್ತಿರುವುದು ವಿಜಯಕುಮಾರರ ಪ್ರಯತ್ನದ ಫಲ.
– ಅರ್ಜುನ ಕಾಂಬೋಜಿ, ಕ್ಷೇತ್ರ ಶಿಕ್ಷಣಾಧಿಕಾರಿ, ರೋಣ


