ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನಪರ ಆಡಳಿತ ನೀಡುವುದರ ಜೊತೆಗೆ ತಮ್ಮ ಅಧಿಕಾರಾವಧಿಯಲ್ಲಿ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿ ಎಲ್ಲರಿಗೂ ಸಮಪಾಲು-ಸಮಬಾಳು ಕೊಡುಗೆ ನೀಡಿದ ಧೀಮಂತ ನಾಯಕರಾಗಿದ್ದರು ಎಂದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಕೆ. ಸುರಕೋಡ ಹೇಳಿದರು.
ಅವರು ಶಿರಹಟ್ಟಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯ ಸಭಾಭವನದಲ್ಲಿ ಏರ್ಪಡಿಸಿದ್ದ ದಿ ಡಿ.ದೇವರಾಜ ಅರಸು ಅವರ 110ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳ ಜೀವನ ವಿಧಾನಗಳನ್ನು ಉತ್ತಮಪಡಿಸುವ ವಚನಬದ್ಧತೆ ಹೊಂದಿದವರಾಗಿದ್ದರು. ವಿನೂತನ ಕಲ್ಪನೆಗಳನ್ನು ಸಾಕಾರಗೊಳಿಸುವುದು ಸಾಮಾಜಿಕ ಬದ್ಧತೆಗಾಗಿ ಕಾರ್ಯಪ್ರವೃತ್ತರಾಗಿ ಹೆಚ್ಚು ಜನಪರ ಯೋಜನೆಗಳನ್ನು ಜಾರಿಗೊಳಿಸಿ ಅನೇಕರಿಗೆ ಮಾದರಿಯಾಗಿದ್ದರು. ರಾಜ್ಯ ರಾಜಕಾರಣ ಪ್ರವೇಶಿಸಿದ ಡಿ.ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ಮೈಸೂರನ್ನು ಕರ್ನಾಟಕ ರಾಜ್ಯವನ್ನಾಗಿ ಮಾಡಿ, ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಅನುಷ್ಠಾನಗೊಳಿಸಿದರು. ರಾಷ್ಟ್ರ ರಾಜಕಾರಣದಲ್ಲೂ ಸಹ ತಮ್ಮ ವರ್ಚಸ್ಸನ್ನು ಮೂಡಿಸಿದ್ದರು. ಡಿ.ದೇವರಾಜ ಅರಸು ನಡೆ, ನುಡಿ, ಸರಳ ವ್ಯಕ್ತಿತ್ವ ಸರ್ವರಿಗೂ ಮಾದರಿಯಾಗಿದೆ ಎಂದರು.
ನಿಲಯ ಮೇಲ್ವಿಚಾರಕ ಎಂ.ಕೆ. ಹಿರೇಮಠ, ತಾಲೂಕಾ ವಿಸ್ತರಣಾಧಿಕಾರಿ ಬಸವರಾಜ ಹರಪನಳ್ಳಿ, ಎಸ್.ಎಸ್. ಪಾಟೀಲ, ಎಸ್.ಎಸ್. ಗುಂಜಳ, ಶಿವಣ್ಣ ಹಿರೆಣ್ಣವರ ಹಾಗೂ ವಸತಿ ನಿಲಯಗಳ ಮೇಲ್ವಿಚಾರಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.