ಲಕ್ಕುಂಡಿ ಉತ್ಖನನ ಕಾರ್ಯ ಮಹತ್ವದ್ದು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಗೆ ಜೂನ್ 3ರಂದು ಮುಖ್ಯಂತ್ರಿಗಳು ಆಗಮಿಸಿ ಲಕ್ಕುಂಡಿಯ ಐತಿಹಾಸಿಕ ಸ್ಥಳದಲ್ಲಿ ನಮ್ಮ ಪರಂಪರೆಯನ್ನು ಪೂರ್ಣ ಪ್ರಮಾಣದಲ್ಲಿ ತಿಳಿಸುವ, ಯುನೆಸ್ಕೋ ಜಾಗತಿಕ ಪ್ರವಾಸಿ ತಾಣ ಆಗುವ ಎಲ್ಲ ಅರ್ಹತೆ, ಆಕರ್ಷಣೆ ಹೊಂದಿರುವ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯಕ್ಕೆ ಚಾಲನೆ ನೀಡುವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ನಗರದ ಉಪವಿಭಾಗಾಧಿಕಾರಿಗಳ ಕಟ್ಟಡದಲ್ಲಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಯಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಸಚಿವರು ಮಾತನಾಡುತ್ತಿದ್ದರು.

ಸಿಎಂ ಸಿದ್ದರಾಮಯ್ಯ ಅವರು ನಂತರ ಲಕ್ಕುಂಡಿಯ ಬಯಲು ಪ್ರಾಚ್ಯಾವಶೇಷಗಳ ವಸ್ತು ಸಂಗ್ರಾಹಲಯದ ವೀಕ್ಷಣೆ ಮಾಡಿ ಕಾಶಿ ವಿಶ್ವನಾಥ ದೇಸವಸ್ಥಾನಕ್ಕೆ ಭೇಟಿ ನೀಡುವರು. ಅಲ್ಲಿಂದ ಗದಗ ನಗರಕ್ಕೆ ಆಗಮಿಸುವರು. ಮಧ್ಯಾಹ್ನ 12.50 ಗಂಟೆಗೆ ಗದಗ ನಗರದ ಶ್ರೀ ಸ್ವಾಮಿ ವಿವೇಕಾನಂದ ಭವನದಲ್ಲಿ ಕರ್ನಾಟಕ ಕುರುಬರ ಸಂಘ ಮತ್ತು ಕರ್ನಾಟಕ ಕುರಬರ ಸಹಕಾರಿ ಪತ್ತಿನ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.

ಮಧ್ಯಾಹ್ನ 3.30 ಗಂಟೆಗೆ ಗದಗ ಕೋ-ಆಪರೇಟೀವ್ ಇಂಡಸ್ಟಿçಯಲ್ ಎಸ್ಟೇಟ್ ಆವರಣಕ್ಕೆ ಆಗಮಿಸಿ ಜಿ.ಎನ್.ಟಿ.ಟಿ.ಎಫ್ ಸಂಸ್ಥೆಯನ್ನು ಉದ್ಘಾಟಿಸುವರು. ಸಾಯಂಕಾಲ 4.30 ಗಂಟೆಗೆ ಜಿಲ್ಲಾ ರಂಮಂದಿರದಲ್ಲಿ ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರದ ಉದ್ಘಾಟನೆ ಹಾಗೂ 34 ಎಕರೆ ಪ್ರದೇಶದ ಪ್ರಾಧಿಕಾರದ ಪರಿಕಲ್ಪನೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಈ ಕಾರ್ಯಕ್ಕೆ ಪ್ರದೇಶಗಳನ್ನು ಗುರುತಿಸಿ ಒಪ್ಪಿಗೆ ಪಡೆದ ನಂತರವೇ ಪ್ರಾರಂಭಿಸಲಾಗುವದು. ಪ್ರಾಚ್ಯವಸ್ತುಗಳ ಅನ್ವೇಷಣೆಗೆ ಲಕ್ಕುಂಡಿ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದ್ದು, ಮೊದಲನೇ ಅಭಿಯಾನದಲ್ಲಿಯೇ ಅಂದಾಜು 1200ಕ್ಕಿಂತ ಹೆಚ್ಚಲು ಅವಶೇಷಗಳು ದೊರಕಿವೆ. ಈಗಾಗಲೇ ಲಕ್ಕುಂಡಿ ಗ್ರಾಮದ ಐದು ಮನೆಯವರು ಮುಂದೆ ಬಂದು ಉತ್ಖನನಕ್ಕೆ ತಮ್ಮ ಮನೆ ಬಿಟ್ಟು ಕೊಡುವದಾಗಿ ತಿಳಿಸಿದ್ದಾರೆ. ಲಕ್ಕುಂಡಿಯಲ್ಲಿನ 27 ಮನೆಗಳು ತೆರವಾದರೆ ಅಲ್ಲಿನ ಐದು ದೇವಸ್ಥಾನಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಈ ಮನೆಗಳ ಸ್ಥಳಾಂತರಕ್ಕೆ ಮನೆ ಮಾಲಿಕರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಸಿವಿಲ್ ಪ್ರೊಸಿಸರ್ ಕೋರ್ಟ್ ತಿದ್ದುಪಡಿ ಮಾಡಿ ಕೇಸ್ ಮ್ಯಾನೇಜ್‌ಮೆಂಟ್ ಪದ್ಧತಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ವ್ಯಾಜ್ಯದಲ್ಲಿ ಸಿ.ಪಿ.ಸಿ ಅಮೆಂಡಮೆಂಟ್ 2 ಜಾರಿಗೆ ಬಂದಿದೆ ಇದರಲ್ಲಿ ಸಿವಿಲ್ ಕೇಸ್‌ಗೆ ಕಡ್ಡಾಯವಾಗಿ ರಾಜಿಗೆ ಅವಕಾಶ ಮಾಡಿಕೊಡಲಾಗುವದು. ಈ ಸಮಯದಲ್ಲಿ ರಾಜಿ ಆಗದೆ ಇದ್ದಲ್ಲಿ ನ್ಯಾಯಾಲಯದಲ್ಲಿ ಕೇಸ್ ಪ್ರಾರಂಭವಾದ ದಿನದಿಂದ ಕೇಸ್ ತೀರ್ಪು ಕೊಡುವ ದಿನಾಂಕವನ್ನು ನಿಗದಿಪಡಿಸುವದರ ಮೂಲಕ ಕ್ರಾಂತಿಕಾರಕ ಬದಲಾವಣೆ ತರಲಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾದ ಹಿನ್ನೆಲೆಯಲ್ಲಿ ರೈತರಿಗೆ ವಿತರಿಸುವ ಬಿತ್ತನೆ ಬೀಜ ಕಳಪೆಯಾಗಿದ್ದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವದು ಎಂದು ಸಚಿವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಬಿ.ಬಿ. ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಗದಗ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಬಸವರಾಜ ಕಡೇಮನಿ ಉಪಸ್ಥಿತರಿದ್ದರು.

ನ್ಯಾಯ ವಿಧಾನ ಪದ್ಧತಿಯಲ್ಲಿ ವಿಶೇಷ ಸುಧಾರಣೆಗಳನ್ನು ಕಾಣುತ್ತಿದ್ದೇವೆ. ಶ್ರೀ ಸಾಮಾನ್ಯರ ಪ್ರಕರಣಗಳು ಎರಡು ವರ್ಷಗಳೊಳಗಾಗಿ ಪೂರ್ಣಗೊಳಿಸುವದರ ಮೂಲಕ ಜನ ಸಾಮಾನ್ಯರಿಗೆ ಆರ್ಥಿಕ ಹೊರೆಯಾಗದಂತೆ ನ್ಯಾಯ ಒದಗಿಸಲು ಈ ಕಾನೂನು ತಿದ್ದುಪಡಿ ಮಾಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

“ಲಕ್ಕುಂಡಿಯಲ್ಲಿ ಉತ್ಖನನಕ್ಕೆ ಚಾಲನೆ ನೀಡುವುದು ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿದೆ. ಇದರಿಂದಾಗಿ ಲಕ್ಕುಂಡಿಯನ್ನು ಯುನೆಸ್ಕೋದ ಜಾಗತಿಕ ಪ್ರವಾಸಿ ತಾಣವನ್ನಾಗಿಸಲು ಅನುಕೂಲವಾಗಲಿದೆ. ಉತ್ಖನನಕ್ಕೆ ಅಗತ್ಯ ಅನುದಾನವನ್ನು ನೀಡಲು ಮುಖ್ಯಂಮತ್ರಿಗಳು ಭರವಸೆ ನೀಡಿದ್ದು, ಉತ್ಖನನ ಕಾರ್ಯವನ್ನು ವೈಜ್ಞಾನಿಕವಾಗಿ, ಆರ್ಥಿಕ ಅಡಚಣೆಯಾಗದಂತೆ ನಡೆಸಲಾಗುವದು. ಮೊದಲನೆ ಹಂತದಲ್ಲಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನಕ್ಕೆ ಚಾಲನೆ ನೀಡಲಾಗುವುದು”

– ಎಚ್.ಕೆ. ಪಾಟೀಲ.

ಜಿಲ್ಲಾ ಉಸ್ತುವಾರಿ ಸಚಿವರು.


Spread the love

LEAVE A REPLY

Please enter your comment!
Please enter your name here