ವಿಜಯಸಾಕ್ಷಿ ಸುದ್ದಿ, ಗದಗ: ಅಂಧ–ಅನಾಥರ ಆಶ್ರಯದಾತ, ಸಂಗೀತದಿಂದ ಜಗದ ಬೆಳಕಾದ, ಬೇಡವಾದ ಬದುಕನು ಬೆಳಗುವಂತೆ ಮಾಡಿದ ಸರಸ್ವತಿಯ ಪುತ್ರ, ಸೋತುಹೋದವರ ಕತ್ತಲ ಬಾಳಿಗೆ ಗಾನಯೋಗಿ ಪುಟ್ಟರಾಜ ಗವಾಯಿಗಳು ಬೆಳಕಾಗಿದ್ದಾರೆ ಎಂದು ಸಂಗೀತ ಕಲಾವಿದೆ, ಬಂಜಾರ ಭಾಷಾ ಅಕಾಡೆಮಿ ಸದಸ್ಯರಾದ ಸಾವಿತ್ರಿ ಲಮಾಣಿ ಅಭಿಪ್ರಾಯಪಟ್ಟರು.
ನವಜ್ಯೋತಿ ಸೇವಾ ಸಂಸ್ಥೆ ನಾಗಾವಿ, ನವಜ್ಯೋತಿ ಸಮಗ್ರ ವ್ಯಸನಮುಕ್ತಿ ಹಾಗೂ ಪುನರ್ವಸತಿ ಕೇಂದ್ರ ಗದಗ, ಪೂರ್ಣತಾರೆ ಜನಸೇವಾ ಸಂಸ್ಥೆ ಗದಗ ಹಾಗೂ ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಮುಂಡರಗಿ ಸಹಯೋಗದಲ್ಲಿ ಗಾನಯೋಗಿ ಡಾ. ಪಂ. ಪುಟ್ಟರಾಜ ಗವಾಯಿಗಳ 15ನೇ ಪುಣ್ಯಸ್ಮರಣಾರ್ಥ `ನಾದ ಬ್ರಹ್ಮನಿಗೆ ನಮನ’ ಕುಂಚ, ಕಾವ್ಯ, ನಾದ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ಅನ್ನದಾನಿ ಹಿರೇಮಠ ಮಾತನಾಡಿ, ತ್ರಿಭಾಷಾ ಪಂಡಿತರಾಗಿ ಸಾಹಿತ್ಯ ಲೋಕಕ್ಕೆ ಬೆಳಕು ಚೆಲ್ಲಿ, ನಾಟಕ ಕಂಪನಿಗಳನ್ನು ಆರಂಭಿಸಿ ಹಲವಾರು ಕಲಾವಿದರ ಬದುಕನ್ನು ಕಟ್ಟಿದ ಕೀರ್ತಿ ಪುಟ್ಟರಾಜರಿಗೆ ಸಲ್ಲುತ್ತದೆ. ಇವರ ಅನಾರೋಗ್ಯದ ಸಮಯದಲ್ಲಿ ನೂರಾರು ವೈದ್ಯರು ಸೇವೆ ಮಾಡಿದರು. ಈ ಸಂದರ್ಭದಲ್ಲಿ ಜಾತಿ–ಧರ್ಮವನ್ನು ಮರೆತು ಪ್ರಾರ್ಥಿಸಿದರು. ಇವರ ಅನರ್ಘ್ಯ ಸೇವೆಗೆ ನಾಡಿನ ಜನರೆಲ್ಲ ಕಂಬನಿ ಮಿಡಿದರು ಎಂದು ನುಡಿ ನಮನ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನವಜ್ಯೋತಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಬೇವಿನಮರದ, ನಮ್ಮ ಆರಾಧ್ಯ ದೈವ ಪುಟ್ಟರಾಜರು ನಮ್ಮ ನಾಡು ಕಂಡ ಶ್ರೇಷ್ಠ ದೇವರು. ಇವರು ನಡೆದಾಡಿದ ನೆಲ ಪಾವನ. ಅಂತಹ ನೆಲದಲ್ಲಿ ನಾವು ಇದ್ದು, ಅವರನ್ನು ನೋಡಿದ ಭಾಗ್ಯ ನಮ್ಮದಾಗಿದೆ. ನಮ್ಮ ವ್ಯಸನಮುಕ್ತಿ ಕೇಂದ್ರದಲ್ಲಿ ಹಲವಾರು ವ್ಯಸನಿಗಳನ್ನು ಬದಲಾಯಿಸಿ ಹೊಸ ಬದುಕನ್ನು ಕಟ್ಟಿದ್ದೇವೆ. ಇದರ ಸೇವೆ ನಮಗೆ ತೃಪ್ತಿ ತಂದಿದೆ ಎಂದರು.
ವೇದಿಕೆಯ ಮೇಲೆ ನಿರ್ಮಲಾ ತರವಾಡೆ, ಹನುಮಂತಗೌಡ ಪಾಟೀಲ, ಕಳಕಪ್ಪ ತಳವಾರ ಯಲಬುರ್ಗಾ, ಶ್ವೇತಾ ಕೋಳೆಕರ ಉಪಸ್ಥಿತರಿದ್ದರು. ಕಳಕೇಶ ಅರಿಕೇರಿ, ಎಸ್.ಬಿ. ಭಜಂತ್ರಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಸವರಾಜ ನೆಲಜೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಳಕೇಶ ಅರಿಕೇರಿ, ಪ್ರಕಾಶ ಕಮ್ಮಾರ ಸ್ವರ ನಮನ ಸಲ್ಲಿಸಿದರು. ಎಸ್.ಬಿ. ಭಜಂತ್ರಿ ಶಹನಾಯಿ ವಾದನದ ಮೂಲಕ ನಮನ ಸಲ್ಲಿಸಿದರು. ಬಸವರಾಜ ನೆಲಜೇರಿ ಚಿತ್ರ ರಚಿಸಿ ಕುಂಚ ನಮನ ಸಲ್ಲಿಸಿದರು. ಕಾವ್ಯ ನಮನದಲ್ಲಿ ಮಂಜುನಾಥ ಡೋಣಿ, ಶಾರದಾ ಬಾಣದ, ಕೊಟ್ರೇಶ ಜವಳಿ, ಗಣೇಶಗೌಡ ಪಾಟೀಲ, ಗಣೇಶ ಬಡಿಗೇರ, ಕಸ್ತೂರಿ ವೀರಣ್ಣ ಕಡಗದ ಕಾವ್ಯ ನಮನ ಸಲ್ಲಿಸಿದರು.



