ಸೇವಾಕಾರಣದ ಕೊನೆಯ ಕೊಂಡಿ ಡಿ.ಆರ್. ಪಾಟೀಲ: ಸಚಿವ ಕೃಷ್ಣ ಭೈರೇಗೌಡ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಡಿ.ಆರ್. ಪಾಟೀಲರಂಥಹ ಸಂತ ರಾಜಕಾರಣಿಯನ್ನು ರಾಜಕೀಯ ವ್ಯವಸ್ಥೆ ಗುರುತಿಸದಿದ್ದರೂ ಜನರು ಸದಾ ಅಂಥವರನ್ನು ಸ್ಮರಿಸುತ್ತಾರೆ. ಡಿ.ಆರ್. ಪಾಟೀಲರದ್ದು ಪರಿಪೂರ್ಣ ವ್ಯಕ್ತಿತ್ವ. ಸಾಮಾನ್ಯರಲ್ಲಿಯೇ ಸಾಮಾನ್ಯರು. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ನಾವು ಅವರಂತೆ ಆಗಲು ಸಾಧ್ಯವಿಲ್ಲ. ಕನಿಷ್ಠಪಕ್ಷ ಅವರಂಥ ಧೀಮಂತ ನಾಯಕರು ಭವಿಷ್ಯದ ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡಲಿ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಆಶಿಸಿದರು.

Advertisement

ಬುಧವಾರ ನಗರದ ತೋಂಟದಾರ್ಯ ಮಂಠದ ಆವರಣದಲ್ಲಿನ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ, ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟವಾದ, ಜೆ.ಕೆ. ಜಮಾದಾರ ಸಂಪಾದಿಸಿದ `ಸಂತ ರಾಜಕಾರಣಿ ಶ್ರೀ ಡಿ.ಆರ್. ಪಾಟೀಲ’ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಪ್ರಭಾವದಿಂದ ರಾಜಕಾರಣ ಜನಸೇವೆಗೆ ದಾರಿಯಾಗಿತ್ತು. ಕಾಲ ಬದಲಾದಂತೆ ರಾಜಕಾರಣದಲ್ಲಿ ಸೇವಾ ಕಾರಣ ಹೋಗಿ ಸ್ವಕಾರಣ ಮಾತ್ರ ಉಳಿದಿದೆ. ಸೇವಾಕಾರಣದ ಕೊನೆಯ ಕೊಂಡಿಯಾಗಿರುವ ಡಿ.ಆರ್. ಪಾಟೀಲ ಅವರಂಥವರನ್ನು ವಿಧಾನಸೌಧಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಗ್ರಂಥ ಬಿಡುಗಡೆಗೊಳಿಸಿ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ. ಕೃಷ್ಣ ಮಾತನಾಡಿ, ಲೋಕಸಭೆ ಸದಸ್ಯರ ಪೈಕಿ ಶೇ. ೪೦ರಷ್ಟು ಸಂಸದರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಅಂಥವರಿಗೆ ಡಿ.ಆರ್. ಪಾಟೀಲ ಮಾದರಿಯಾಗಿದ್ದಾರೆ. ಗಾಂಧೀಜಿ ಅವರಿಗೆ ಮಹಾತ್ಮ ಎನ್ನುವ ಬಿರುದು ಕೊಟ್ಟಿದ್ದು ಈ ದೇಶದ ಜನ. ಅದೇ ರೀತಿ ಡಿ.ಆರ್. ಪಾಟೀಲರಿಗೂ ಸಂತ ರಾಜಕಾರಣಿ ಎಂದು ಬಿರುದು ಕೊಟ್ಟಿದ್ದು ಕೂಡ ಜನರೇ. ಡಿ.ಆರ್. ಪಾಟೀಲರ ನಿಸ್ವಾರ್ಥ ಬದುಕು, ಬಡವರ ಪರ ಕಾಳಜಿ ಅನುಕರಣೀಯ ಎಂದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಡಿ.ಆರ್. ಪಾಟೀಲರು ಎಂ.ವೈ. ಘೋರ್ಪಡೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗಿನಿಂದ ಈವರೆಗೂ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಸಂಪೂರ್ಣ ಜಾರಿಗೆ ಬರಬೇಕು ಎಂದು ಒತ್ತಾಯಿಸುತ್ತಾ ಬಂದವರು. ಅಧಿಕಾರ ಇರಲಿ, ಇಲ್ಲದಿರಲಿ ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳಬೇಕು ಎನ್ನುವ ಮಹದಾಸೆ ಹೊಂದಿರುವ ಸಂತ ರಾಜಕಾರಣಿ. ಅವರ ಮಾರ್ಗದರ್ಶನದಿಂದ ನಾನು ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗೆ ನೇರವಾಗಿ ಅನುದಾನ ಒದಗಿಸುವುದು, ಟೆಂಡರ್ ವ್ಯವಸ್ಥೆ ಕಲ್ಪಿಸಿದೆ. ಆದರೆ ಮುಂದೆ ಬಂದ ಸರಕಾರ ಅದನ್ನು ರದ್ದು ಮಾಡಿತು ಎಂದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ನಾಡಿನ ಮಠಾಧೀಶರು ಒಗ್ಗೂಡಿಕೊಂಡು ಸಮಾಜದಲ್ಲಿ ಒಳ್ಳೆಯವರನ್ನು ರಾಜಕಾರಣಕ್ಕೆ ತರುವ ಪ್ರಯತ್ನ ಮಾಡಬೇಕು. ಇದೇ ಡಿಸೆಂಬರ್ 26-27ರಂದು ಗಾಂಧೀಜಿ ಭೇಟಿಯ ಶತಮಾನೋತ್ಸವ ಆಚರಣೆ ಮಾಡುತ್ತಿದ್ದು, ಆ ಸಂದರ್ಭದಲ್ಲಾದರೂ ಅಧಿಕಾರ ವಿಕೇಂದ್ರಿಕರಣ ಕಾಯಿದೆ ಸಂಪೂರ್ಣ ಜಾರಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಎಲ್ಲರೂ ಡಿ.ಆರ್. ಪಾಟೀಲ ತಮ್ಮ ಕ್ಷೇತ್ರವನ್ನು ಎಚ್.ಕೆ. ಪಾಟೀಲರಿಗೆ ತ್ಯಾಗ ಮಾಡಿದ್ದಾರೆ ಎನ್ನುತ್ತಾರೆ. ಆದರೆ ಎಚ್.ಕೆ. ಪಾಟೀಲರ ತ್ಯಾಗವನ್ನು ನೆನಪು ಮಾಡಿಕೊಳ್ಳುವುದಿಲ್ಲ. ಕೆ.ಎಚ್. ಪಾಟೀಲರು ನಿಧನರಾದಾಗ ತಾವೇ ಎಂಎಲ್‌ಎ ಟಿಕೆಟ್ ಪಡೆದು ಚುನಾವಣೆ ನಿಲ್ಲಬಹುದಿತ್ತು. ಆದರೆ ನನಗಾಗಿ ಅವರು ಆ ತ್ಯಾಗ ಮಾಡಿ, ಸ್ವತಃ ದೆಹಲಿಯಿಂದ ಟಿಕೆಟ್ ತಂದು ನನಗೆ ಕೊಟ್ಟರು. ಆ ಪ್ರೀತಿ ವಿಶ್ವಾಸಕ್ಕೆ ಎಷ್ಟು ಕೃತಜ್ಞತೆ ಅರ್ಪಿಸಿದರೂ ಕಡಿಮೆಯೇ ಎಂದು ಡಿ.ಆರ್. ಪಾಟೀಲ ಪ್ರಸ್ತಾಪಿಸುತ್ತಿದ್ದಂತೆ ವೇದಿಕೆಯಲ್ಲಿದ್ದ ಎಚ್.ಕೆ. ಪಾಟೀಲ ಕ್ಷಣಕಾಲ ಭಾವುಕರಾದರು.

ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ತೋಂಟದಾರ್ಯ ಮಠಕ್ಕೂ ನನಗೂ ಅವಿನಾಭಾವ ಸಂಬAಧ ಬೆಳೆಯಲು ಡಿ.ಆರ್. ಪಾಟೀಲ ಕಾರಣ. ನಾನು ಮೊಟ್ಟ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯನಾಗಿದ್ದ ಸಂದರ್ಭದಲ್ಲಿ ಯಡಿಯೂರ ಸಿದ್ಧಲಿಂಗೇಶ್ವರ ಟ್ರಸ್ಟ್ ಸದಸ್ಯನಾಗುವ ಅವಕಾಶ ದೊರೆಯಿತು. ಆಗ ತೋಂಟದಾರ್ಯ ಮಠದ ವಿರುದ್ಧ ಕೆಲಸ ಮಾಡುತ್ತಾರೆ ಎನ್ನುವ ವದಂತಿ ಹರಿದಾಡಿತ್ತು.

ಆದರೆ ಡಿ.ಆರ್. ಪಾಟೀಲರು ಲಿಂ. ಸಿದ್ಧಲಿಂಗ ಶ್ರೀಗಳನ್ನು ಭೇಟಿ ಮಾಡಿಸಿ, ಶ್ರೀಮಠದ ಆಶಯದಂತೆ ಕೆಲಸ ಆಗುವವರೆಗೆ ಮಾತ್ರ ಟ್ರಸ್ಟ್ ಸಕ್ರಿಯ ಸದಸ್ಯನಾಗಿ ಕೆಲಸ ಮಾಡಿದೆ. ಅಂದಿನಿಂದ ಶ್ರೀಗಳು ಮತ್ತು ನನ್ನ ಮಧ್ಯೆ ಅವಿನಾಭಾವ ಸಂಬಂಧ ಏರ್ಪಟ್ಟಿತು. ಆ ಕಾರಣಕ್ಕಾಗಿಯೇ ಇವತ್ತು ಗ್ರಂಥ ಬಿಡುಗಡೆ ಮಾತ್ರವಲ್ಲದೆ, ನಮ್ಮ ಪರಿವಾರದ ಪರಿಚಯ ಸಮಾಜಕ್ಕೆ ಆಗುವಂತಾಯಿತು ಎಂದರು.

ತೋಂಟದ ಸಿದ್ದರಾಮ ಸ್ವಾಮೀಜಿ, ನಿರ್ಭಯಾನಂದ ಸ್ವಾಮೀಜಿ, ಜಗನ್ನಾಥ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ, ಉಪಸಭಾಪತಿ ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕರಾದ ಬಿ.ಆರ್. ಯಾವಗಲ್, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಪ್ರೊ. ಬಿ.ಎಫ್. ದಂಡಿನ, ಸತೀಶ ಕಾಡಶೆಟ್ಟಿ, ಆರ್.ರಘು, ನರೇಂದ್ರ ಎನ್.ಸಿ., ಜಿ.ಬಿ. ಶಿವರಾಜ ಇತರರು ಉಪಸ್ಥಿತರಿದ್ದರು.

ಶ್ರೀಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಗ್ರಂಥಕರ್ತ ಜೆ.ಕೆ. ಜಮಾದಾರ, ಡಿ.ಆರ್. ಪಾಟೀಲ, ಎಂ.ಆರ್. ಪಾಟೀಲ, ಪಿ.ಕೆ. ಪಾಟೀಲ ದಂಪತಿಯನ್ನು ಸನ್ಮಾನಿಸಲಾಯಿತು.


Spread the love

LEAVE A REPLY

Please enter your comment!
Please enter your name here