ವಿಜಯಸಾಕ್ಷಿ ಸುದ್ದಿ, ದಾವಣಗೆರೆ: ದೇವರು ಎಲ್ಲರಲ್ಲಿ ಇದ್ದರೂ ದೇವರಲ್ಲಿ ಎಲ್ಲರೂ ಇಲ್ಲ. ಭಗವಂತನಿತ್ತ ಸಂಪತ್ತು ಬಾಳಿನ ಅಮೂಲ್ಯ ಸಂಪತ್ತು. ಭಕ್ತ ಭಗವಂತನೆಡೆಗೆ ಹೋದಾಗ ಜೀವನ ಪಾವನ. ದೇವರ ಮೇಲಿನ ನಂಬಿಕೆ ಮನುಷ್ಯನ ಬಾಳಿಗೆ ನಂದಾದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಲೆನಿನ್ ನಗರದ ಐ.ಟಿ.ಐ ಕಾಲೇಜು ಆವರಣದಲ್ಲಿರುವ ಗ್ರಾಮದೇವತೆ ಶ್ರೀ ಚೌಡೇಶ್ವರಿ ಕಾರ್ತಿಕೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಮಸ್ತ ಜನರ ಭೋಗ-ಮೋಕ್ಷಗಳಿಗೆ ಧರ್ಮವೇ ಮೂಲ. ಬಾಳಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಬೇಕು. ಮನುಷ್ಯ ಜೀವನವನ್ನು ಸುಂದರ ಮತ್ತು ಶುದ್ಧಗೊಳಿಸುವುದೇ ಧರ್ಮದ ಗುರಿ. ಹೆತ್ತ ತಾಯಿ, ಹೊತ್ತ ಭೂಮಿ ಮನುಷ್ಯನಿಗೆ ಎಷ್ಟು ಮುಖ್ಯವೋ ಅಷ್ಟೇ ಧರ್ಮವೂ ಮುಖ್ಯವಾಗಿದೆ. ಸಂಪತ್ತು ಬೆಳೆದಂತೆ ಸಭ್ಯತೆ, ಸಂಸ್ಕೃತಿ ಬೆಳೆಯಬೇಕು. ಶಿವ ಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಶಿವನ ಆರಾಧನೆ ಎಷ್ಟು ಪ್ರಾಚೀನವೋ ಅಷ್ಟೇ ಶಕ್ತಿ ಆರಾಧನೆ ಪ್ರಾಚೀನವಾಗಿದೆ. ಶಿವನ ಬಿಟ್ಟು ಶಕ್ತಿ, ಶಕ್ತಿ ಬಿಟ್ಟು ಶಿವನಿಲ್ಲದ ಕಾರಣ ಶ್ರೀ ಜಗದ್ಗುರು ರೇಣುಕಾಚಾರ್ಯರು `ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ’ವನ್ನು ಬೋಧಿಸಿ ಉದ್ಧರಿಸಿದ್ದಾರೆ. ಜ್ಞಾನ ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ. ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟಿನವರು ಪ್ರತಿ ವರ್ಷ ಅತ್ಯಂತ ವೈಭವದಿಂದ ಕಾರ್ತಿಕ ದೀಪೋತ್ಸವ ಆಚರಿಸುತ್ತಿರುವುದು ಅವರಲ್ಲಿರುವ ಧರ್ಮ ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.
ದಾವಣಗೆರೆ-ಹರಿಹರ ಅರ್ಬನ್ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕಾಗಿದೆ. ಶ್ರದ್ಧೆ ಇದ್ದರೆ ಧರ್ಮ, ಸಂಸ್ಕೃತಿ ಉಳಿಯಲು ಸಾಧ್ಯ. ವೈಚಾರಿಕತೆಯ ಹೆಸರಿನಲ್ಲಿ ನಮ್ಮ ನಾಡಿನ ಸಂಸ್ಕೃತಿ ನಾಶವಾಗಬಾರದೆಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ವಾಗೀಶಸ್ವಾಮಿ ಮಾತನಾಡಿ, ಹಿರಿಯರ ಮೌಲ್ಯಾಧಾರಿತ ಚಿಂತನಗಳು ಬಾಳಿನ ಆಶಾ ಕಿರಣ. ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೇ ಮಾರಕವಾಗಬಾರದೆಂದರು.
ಅ.ಭಾ.ವೀ.ಲಿಂ ಮಹಾಸಭೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಸ್.ಜಿ. ಉಳವಯ್ಯ, ಎಸ್.ಜೆ. ಶ್ರೀಧರ, ಅಕ್ಕಿ ರಾಜು, ಮಾಜಿ ದೂಡಾ ಅಧ್ಯಕ್ಷ ಕೆ.ಎಂ. ಸುರೇಶ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಸಾರೋಟ ಭವ್ಯ ಮೆರವಣಿಗೆಯೊಂದಿಗೆ ಬರಮಾಡಿಕೊಂಡರು. ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಸುಮಂಗಲೆಯರು, ಜಾನಪದ ಕಲಾತಂಡಗಳು ಉತ್ಸವದಲ್ಲಿ ಪಾಲ್ಗೊಂಡು ಮೆರವಣಿಗೆಗೆ ಶೋಭೆ ತಂದರು. ಸಮಾರಂಭದ ನಂತರ ಸಕಲ ಸದ್ಭಕ್ತರಿಗೂ ಅನ್ನ ದಾಸೋಹ ಜರುಗಿತು.
ನೇತೃತ್ವ ವಹಿಸಿದ ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಜೀವನ ವ್ಯರ್ಥ. ಹೊರಗಿನ ಕತ್ತಲೆ ಕಳೆಯಲು ದೀಪ ಬೇಕು. ಅಂತರಂಗದ ಕತ್ತಲೆ ಕಳೆಯಲು ಗುರು ಬೋಧೆ ಮುಖ್ಯವೆಂದರು.



